ಲಾಹೋರ್ (ಪಾಕಿಸ್ತಾನ): ನಜ್ಮುಲ್ ಹೊಸೈನ್, ಮೆಹಿದಿ ಹಸನ್ ಮಿರಾಜ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಹಾಗೂ ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ ಅವರ ಪ್ರಬಲ ಬೌಲಿಂಗ್ ದಾಳಿಯ ನೆರವಿನಿಂದ ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನ ವಿರುದ್ಧ 89 ರನ್ಗಳಿಂದ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಬಾಂಗ್ಲಾ ಸೂಪರ್ ಫೋರ್ನಿಂದ ಹೊರ ಬೀಳುವ ಭಯದಿಂದ ತಪ್ಪಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ನಜ್ಮುಲ್ ಹೊಸೈನ್, ಮೆಹಿದಿ ಹಸನ್ ಮಿರಾಜ್ ಅವರ ಶತಕದ ನೆರವಿನಿಂದ 334 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ 44.3 ಓವರ್ನಲ್ಲಿ 245 ರನ್ ಗಳಿಸಿ ಸರ್ವಪತನ ಕಂಡು 89 ರನ್ನಿಂದ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: BAN vs AFG: ಅಫ್ಘಾನಿಸ್ತಾನ ಮುಂದೆ ಪುಟಿದೆದ್ದ ಬಾಂಗ್ಲಾ.. ಮಿರಾಜ್, ನಜ್ಮುಲ್ ಶತಕದಾಟಕ್ಕೆ ಅಫ್ಘಾನ್ಗೆ 335 ರನ್ನ ಗುರಿ
ಬಾಂಗ್ಲಾ ತಂಡ ತನ್ನ ಇಡೀ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರರ್ದಶನ ನೀಡಿತು. ಮಿರಾಜ್ 119 ಎಸೆತಗಳಲ್ಲಿ 112 ರನ್ ಹಾಗೂ ಮತ್ತು ಶಾಂಟೋ 105 ಎಸೆತಗಳಲ್ಲಿ 104 ರನ್ ಸಿಡಿಸಿ ತಂಡವನ್ನು ಬೃಹತ್ ಮೊತ್ತಕ್ಕೆ ಮುಂದೂಡಿದರು. ಬೌಲಿಂಗ್ನಲ್ಲಿ ತಸ್ಕಿನ್ ಅಹ್ಮದ್ 4 ವಿಕೆಟ್ ಹಾಗೂ ಶೋರಿಫುಲ್ ಇಸ್ಲಾಂ 3 ವಿಕೆಟ್ ಪಡೆದು ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮತ್ತೊಂದೆಡೆ, ಅಫ್ಘಾನಿಸ್ತಾನ ಆಟಗಾರರು ಸಹ ಉತ್ತಮ ಪ್ರರ್ದಶನ ನೀಡಿದರು. ರಹಮನುಲ್ಲಾ ಗುರ್ಬಾಜ್ ರೂಪದಲ್ಲಿ ಆರಂಭಿಕ ವಿಕೆಟ್ ಕಳೆದುಕೊಂಡರೂ ಅಫ್ಘಾನ್ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒಳ್ಳೆಯ ರನ್ಗಳನ್ನೇ ಕಲೆ ಹಾಕಿದರು. ವಿಶೇಷವಾಗಿ ಇಬ್ರಾಹಿಂ ಜದ್ರಾನ್ ಮತ್ತು ರಹಮತ್ ಶಾ ಜವಾಬ್ದಾರಿಯುತ ಆಟವಾಡಿ ಬಾಂಗ್ಲಾ ಬೌಲರ್ಗಳನ್ನು ಕಾಡಿದರು. ರಮಹತ್ 33 ರನ್ ಗಳಿಸಿ ಔಟಾದರು. ಆದರೂ, ಈ ಜೋಡಿ ಎರಡನೇ ವಿಕೆಟ್ಗೆ 78 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿತು.
ರಹಮತ್ ವಿಕೆಟ್ ಬಿದ್ದ ಬಳಿಕವೂ ಇಬ್ರಾಹಿಂ ಜದ್ರಾನ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಕೆಲ ಭರ್ಜರಿ ಹೊಡೆತಗಳೊಂದಿಗೆ ಅವರು 50 ರನ್ ಗಡಿ ದಾಟಿದರು. ಮೂರನೇ ವಿಕೆಟ್ಗೆ ಜೊತೆಯಾದ ಹಶಮತುಲ್ಲಾ ಶಾಹಿದಿ ಕೂಡ ಉತ್ತಮ ಬ್ಯಾಟಿಂಗ್ ಪ್ರರ್ದಶಿಸಿದರು. ಈ ನಡುವೆ 10 ಬೌಂಡರಿ, ಒಂದು ಸಿಕ್ಸರ್ನೊಂದಿಗೆ 75 ರನ್ಗಳು ಗಳಿಸಿದ್ದಾಗ ಜದ್ರಾನ್ ಪೆವಿಲಿಯನ್ ಸೇರಿಸಿದರು. ಮತ್ತೊಂದೆಡೆ, ಶಾಹಿದಿ (51) ಅರ್ಧಶತಕ ಗಳಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ರಶೀದ್ ಖಾನ್ (24) ಕೊನೆಯಲ್ಲಿ ಕೆಲ ಬೌಂಡರಿಗಳನ್ನು ಹೊಡೆದರೂ ಬಾಂಗ್ಲಾ ನೀಡಿದ್ದ ದೊಡ್ಡ ಸವಾಲು ಹಾಗೂ ಬೌಲರ್ಗಳನ್ನು ಎದುರಿಸಲು ಅಫ್ಘಾನ್ ಆಟಗಾರರಿಗೆ ಸಾಧ್ಯವಾಗಿಲ್ಲ. ಹೀಗಾಗಿ 5.3 ಓವರ್ಗಳು ಬಾಕಿ ಇರುವಾಗಲೇ ಸರ್ವಪತನ ಕಂಡರು.