ಮುಂಬೈ: ರವಿಚಂದ್ರನ್ ಅಶ್ವಿನ್, ಕ್ರಿಕೆಟ್ನಲ್ಲಿರುವ ಕಾನೂನುಗಳನ್ನು ಪಾಲಿಸುವುದರಲ್ಲಿ ಅಥವಾ ಜಾರಿಗೆ ತರುವುದರಲ್ಲಿ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಿಟೈಡ್ ಔಟ್ ಅಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ರೀತಿ ವಿಕೆಟ್ ನೀಡಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
2018ರಲ್ಲಿ ಪಂಜಾಬ್ ಪರ ಆಡುವಾಗ ನಾನ್ ಸ್ಟ್ರೈಕ್ನಲ್ಲಿ ಕ್ರೀಸ್ ಬಿಟ್ಟು ಹೋಗಿದ್ದ ಜಾಸ್ ಬಟ್ಲರ್ರನ್ನು ಮಂಕಡ್ ಮಾಡುವ ಮೂಲಕ ಔಟ್ ಮಾಡಿದ್ದರು. ಇದನ್ನು ಬಹುಪಾಲು ವಿಶ್ಲೇಷಕರು ಮತ್ತು ಮಾಜಿ ಕ್ರಿಕೆಟಿಗರು ಟೀಕಿಸಿದರೂ, ಅದಕ್ಕೆಲ್ಲಾ ಕ್ರಿಕೆಟ್ ಪುಸ್ತಕದಲ್ಲಿರುವ ಕಾನೂನುಗಳಿಂದ ವಿವರಣೆ ನೀಡಿ ತಿರುಗೇಟು ನೀಡಿದ್ದರು. ಇದು ದೊಡ್ಡ ವಿವಾದವಾದರೂ ಅದಕ್ಕೆಲ್ಲಾ ಡೋಂಟ್ ಕೇರ್ ಎಂದಿದ್ದರು. ಕೊನೆಗೆ ಎಂಸಿಸಿ ಮಂಕಡ್ ಅನ್ನು ರನ್ಔಟ್ ಎಂದು ಕಾನೂನನ್ನು ರಚಿಸಿದ್ದು, ಐಪಿಎಲ್ನಲ್ಲೂ ಮಂಕಡ್ಗೆ ರನ್ಔಟ್ ಎಂದು ಈಗಾಗಲೇ ಘೋಷಿಸಲಾಗಿದೆ.
ಇದೀಗ ಮತ್ತೆ ಅಶ್ವಿನ್ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಇಂದು ಲಖನೌ ವಿರುದ್ಧ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಅವರು 23 ಎಸೆತಗಳಲ್ಲಿ 28 ರನ್ಗಳಿಸಿದ್ದ ವೇಳೆ ರಿಟೈರ್ಡ್ ಔಟ್ ಆಗಿ ಮೈದಾನ ತೊರೆದು ರಿಯಾನ್ ಪರಾಗ್ಗೆ ಬ್ಯಾಟಿಂಗ್ ಮಾಡುವುದಕ್ಕೆ ಅನುವು ಮಾಡಿಕೊಟ್ಟರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ರೀತಿ ಔಟಾದ ಮೊದಲ ಕ್ರಿಕೆಟಿಗ ಎನಿಸಿಕೊಂಡರು.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟರ್ಗಳು ಮಾತ್ರ ರಿಟೈರ್ಡ್ ಔಟ್ ಆಗಿದ್ದಾರೆ. ಪಾಕಿಸ್ತಾನದ ಶಾಹೀದ್ ಅಫ್ರಿದಿ, ಭೂತಾನ್ನ ಸೋನಮ್ ಟಾಬ್ಗೆ, ಕುಮಿಲಾ ವಾರಿಯರ್ಸ್ನ ಸಂಜಮುಲ್ ಇಸ್ಲಾಮ್ ಈ ರೀತಿ ವಿಕೆಟ್ ಒಪ್ಪಿಸಿದ್ದರು.
ಎಂಸಿಸಿ 25.4.3 ಕಾನೂನಿನ ನಿಯಮದ ಪ್ರಕಾರ ಯಾವುದೇ ಬ್ಯಾಟರ್ ಯಾವುದೇ ಆನಾರೋಗ್ಯ, ಗಾಯ (ನಿಯಮ 25.4.2) ಆಗದೆ ಮೈದಾನ ತೊರೆದರೆ ಆತ ಎದುರಾಳಿ ತಂಡದ ನಾಯಕ ಒಪ್ಪಿದರೆ ಮಾತ್ರ ಮತ್ತೆ ಬ್ಯಾಟಿಂಗ್ ಮುಂದುವರಿಸಬಹುದು. ಒಂದು ವೇಳೆ ಆತನ ಇನ್ನಿಂಗ್ಸ್ ಮುಂದುವರಿಯದಿದ್ದರೆ, ಅದನ್ನು ರಿಟೈರ್ಡ್ ಔಟ್ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ:ಮೆಗಾ ಹರಾಜಿಗೂ ಮುಂಬೈ ಇಂಡಿಯನ್ಸ್ಗೂ ಆಗಿಬರಲ್ವಾ? ಹೌದು ಎನ್ನುತ್ತಿವೆ ದಾಖಲೆಗಳು!