ಸಿಡ್ನಿ (ಆಸ್ಟ್ರೇಲಿಯಾ): ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಮೊದಲೆರಡು ಪಂದ್ಯ ಸೋತು 2-0 ಅಂತರದಿಂದ ಹಿನ್ನಡೆ ಅನುಭವಿಸಿದೆ. ಇದರ ನಡುವೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಅಲನ್ ಬಾರ್ಡರ್ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಭಾರತದ ವಿರುದ್ಧದ ಸರಣಿಯು ಕಮಿನ್ಸ್ಗೆ ನಾಯಕನಾಗಿ ಮೊದಲ ನಿಜವಾದ ಪರೀಕ್ಷೆ ಎಂದು ಹೇಳಿದ್ದಾರೆ.
ನಾಲ್ಕು ಪಂದ್ಯಗಳ ಸರಣಿಯಲ್ಲಿ, ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ಪ್ರವಾಸಕ್ಕೂ ಮೊದಲು ಕಮಿನ್ಸ್ ನಾಯಕನಾಗಿ ಕೇವಲ ಒಂದು ಸೋಲು ಅನುಭವಿಸಿದ್ದರು. ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕಮಿನ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 13 ಓವರ್ ಬೌಲ್ ಮಾಡಿ ಒಂದು ವಿಕೆಟ್ ಪಡೆದಿದ್ದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರಲಿಲ್ಲ.
ಇದನ್ನೂ ಓದಿ: ಭಾರತದ ಸ್ಪಿನ್ ದಾಳಿಗೆ ಆಸ್ಟ್ರೇಲಿಯಾ ತತ್ತರ.. ಬ್ಯಾಟಿಂಗ್ ಸುಧಾರಣೆಗೆ ನೆರವು ನೀಡಲು ಸಿದ್ಧ: ಮಾಜಿ ಕ್ರಿಕೆಟಿಗ
ಬಾರ್ಡರ್ ವಿಶ್ಲೇಷಣೆ: ಈ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ತನ್ನನ್ನು ತಾನು ಒತ್ತಡಕ್ಕೆ ಸಿಲುಕಿಸಿ ಬೌಲಿಂಗ್ ಮಾಡಿದ್ದಾರೆಂದು ನಾನು ಭಾವಿಸಿದ್ದೇನೆ. ಆದರೆ, ಕೆಲವೊಮ್ಮೆ ದಾರಿ ತಪ್ಪುತ್ತಿದ್ದಾಗ ಅವಕಾಶಗಳೂ ಇದ್ದವು. ವಿಶೇಷವಾಗಿ, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಜೊತೆಯಾಟ ಮೂಡಿ ಬರುತ್ತಿದ್ದಾಗ ಪ್ಯಾಟ್ ಕಮಿನ್ಸ್ ಎರಡು ಅಥವಾ ಮೂರು ಓವರ್‌ಗಳವರೆಗೆ ಒಂದೆರಡು ಬಾಲ್ಗಳನ್ನು ವೇಗವಾಗಿ ಮತ್ತು ನಿಧಾನವಾಗಿ ಎಸೆಯುತ್ತಿದ್ದರು ಎಂದು ಹೇಳಿದ್ದಾರೆ.
ಮುಂದುವರೆದು, ಮೊದಲ ಇನ್ನಿಂಗ್ಸ್‌ನಲ್ಲಿ 139 ರನ್ಗಳಿಗೆ 7 ವಿಕೆಟ್ ಪಡೆದು ಭಾರತ ತಂಡವನ್ನು ಕುಗ್ಗಿಸಲಾಗಿತ್ತು. ನಂತರ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಜೋಡಿ 114 ರನ್‌ಗಳ ಜೊತೆಯಾಟ ನೀಡಿದ್ದರು. ಈ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ತಂಡದ ಮೊತ್ತಕ್ಕಿಂತ ಕೇವಲ ಆತಿಥೇಯ ತಂಡ ಒಂದು ರನ್ ಹಿನ್ನಡೆ ಅನುಭವಿಸಿತ್ತು. ಆದರೆ, ಅಕ್ಷರ್ ಮತ್ತು ಅಶ್ವಿನ್ ಜೋಡಿ ಮೈದಾನದಲ್ಲಿದ್ದಾಗ ಇತರ ಆಟಗಾರರು ತಮ್ಮ ನಾಯಕನ ಬಳಿಗೆ ತೆರಳಿ ನೀವು ಯಾಕೆ ಬೌಲಿಂಗ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡಬಹುದಿತ್ತು ಎಂದು ಬಾರ್ಡರ್ ತಿಳಿಸಿದರು.
ಇದನ್ನೂ ಓದಿ: ಭಾರತವನ್ನು ಅದರ ನೆಲದಲ್ಲಿ ಸೋಲಿಸುವುದು ಅಸಾಧ್ಯ: ಪಾಕ್ ಮಾಜಿ ಆಟಗಾರರ ಬಣ್ಣನೆ
ಆದ್ದರಿಂದ ಇದು ನಾಯಕನಾಗಿ ಪ್ಯಾಟ್ ಕಮಿನ್ಸ್ ಅವರಿಗೆ ಮೊದಲ ನಿಜವಾದ ಪರೀಕ್ಷೆ ಎಂದು ನಾನು ಭಾವಿಸಿದ್ದೇನೆ. ಉಳಿದವು ಅವರಿಗೆ ಸುಲಭ ಯಾನವಾಗಿತ್ತು. ನೀವು ಉಪಖಂಡಕ್ಕೆ ತೆರಳಿ, ಇದ್ದಕ್ಕಿದ್ದಂತೆ ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಪರೀಕ್ಷೆಗೆ ಒಳಗಾಗುತ್ತೀರಿ. ಇಂತಹ ಹಲವಾರು ವಿಭಿನ್ನ ವಿಷಯಗಳ ಬಗ್ಗೆ ಕಮಿನ್ಸ್ ಚಿಂತಿತರಾಗಿದ್ದಾರೆ. ತಮ್ಮ ಬೌಲಿಂಗ್ ಅನ್ನೂ ಅವರು ಮರೆತಿದ್ದರು. ಪ್ರಮುಖ ವೇಗದ ಬೌಲರ್ ತಂಡದ ಕ್ಯಾಪ್ಟನ್ ಆಗಿರುವ ಅಂತಹ ಸಂದರ್ಭಗಳಲ್ಲಿ ಏನಾಗಬಹುದೆಂದು ಗೊತ್ತಿದೆ ಎಂದು ಬಾರ್ಡರ್ ಸಹಾನುಭೂತಿಯನ್ನೂ ವ್ಯಕ್ತಪಡಿಸಿದ್ದಾರೆ.
ಎರಡನೇ ಟೆಸ್ಟ್‌ನ ನಂತರ ಕೌಟುಂಬಿಕ ಕಾರಣದಿಂದಾಗಿ ಕಮಿನ್ಸ್ ಭಾರತದಿಂದ ತವರಿಗೆ ಮರಳಿದ್ದಾರೆ. ಇಂದೋರ್ ಮತ್ತು ಅಹಮದಾಬಾದ್‌ನಲ್ಲಿ ನಡೆಯುವ ಉಳಿದೆರಡು ಪಂದ್ಯಗಳಿಗೆ ಮರಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಮೊಣಕೈ ಗಾಯ: ಇಂದೋರ್, ಅಹಮದಾಬಾದ್ ಪಂದ್ಯದಿಂದ ಡೇವಿಡ್ ವಾರ್ನರ್ ಔಟ್..!