ಲಂಡನ್: ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ಇಂಗ್ಲೇಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಅವರು ಬಲಿಷ್ಠ ರಾಷ್ಟ್ರಗಳಾದ SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ)ದಲ್ಲಿ 2000 ರನ್ ಸಂಪೂರ್ಣಗೊಳಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮಹತ್ವದ ಅರ್ಧಶತಕದ ಮೂಲಕ ಭಾರತ ಅಲ್ಪ ಮೊತ್ತಕ್ಕೆ ಕುಸಿಯದಂತೆ ತಡೆದರಲ್ಲದೆ, ಪೂಜಾರ ಜೊತೆಗೂಡಿ 4ನೇ ವಿಕೆಟ್ ಜೊತೆಯಾಟದಲ್ಲಿ 100 ರನ್ ಸೇರಿಸಿದರು. ರಹಾನೆ 146 ಎಸೆತಗಳಲ್ಲಿ 5 ಬೌಂಡರಿ ಸಹಿತ 61 ಮತ್ತು ಪೂಜಾರ 206 ಎಸೆತಗಳಲ್ಲಿ 4 ಬೌಂಡರಿ ಸಹಿತ 45 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ರಹಾನೆ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ SENA ರಾಷ್ಟ್ರಗಳಲ್ಲಿ 2000 ರನ್ ಪೂರೈಸಿದ ಭಾರತದ 8ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಇವರಿಗೂ ಮುನ್ನ ಸಚಿನ್ ತೆಂಡೂಲ್ಕರ್(5387), ರಾಹುಲ್ ದ್ರಾವಿಡ್(3909), ವಿರಾಟ್ ಕೊಹ್ಲಿ(3008), ವಿವಿಎಸ್ ಲಕ್ಷ್ಮಣ್(2710), ಸುನೀಲ್ ಗವಾಸ್ಕರ್(2464), ಸೌರವ್ ಗಂಗೂಲಿ(2311), ಚೇತೇಶ್ವರ್ ಪೂಜಾರ(2115) ಈ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಪ್ರಸ್ತುತ ಭಾರತ ತಂಡ 177ಕ್ಕೆ6 ವಿಕೆಟ್ ಕಳೆದುಕೊಂಡು, 150 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ರಿಷಭ್ ಪಂತ್(13) ಹಾಗೂ ಇಶಾಂತ್ ಶರ್ಮಾ(2) ಬ್ಯಾಟಿಂಗ್ ಮಾಡುತ್ತಿದ್ದಾರೆ.
3ನೇ ದಿನ ಭಾರತದ 364ರನ್ಗಳಿಗೆ ಉತ್ತರವಾಗಿ ಇಂಗ್ಲೆಂಡ್ 391 ರನ್ಗಳಿಸಿ 27 ರನ್ಗಳ ಮುನ್ನಡೆ ಸಾಧಿಸಿತ್ತು. ಆಂಗ್ಲರ ನಾಯಕ ಜೋ ರೂಟ್ 180 ರನ್ಗಳಿಸಿ ಇಂಗ್ಲೆಂಡ್ ತಂಡಕ್ಕೆ ನೆರವಾಗಿದ್ದರು.
ಇದನ್ನು ಓದಿ: ಟೆಸ್ಟ್ ಕ್ರಿಕೆಟ್ ಉಳಿಸಬೇಕೆನ್ನುವವರು ಕೊಹ್ಲಿಯನ್ನ ತಮ್ಮ ವಕ್ತಾರರನ್ನಾಗಿ ನೇಮಿಸಲಿ : ಇಯಾನ್ ಚಾಪೆಲ್