ನವದೆಹಲಿ: ಕ್ರೀಡಾಪಟುಗಳು ಫಲಿತಾಂಶಗಳ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ಕ್ರೀಡೆಗಳನ್ನು ಆನಂದಿಸಬೇಕು ಎಂದು ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು ಮಕ್ಕಳಿಗೆ ಕ್ರೀಡೆಯ ಮಹತ್ವ ತಿಳಿಸಿಕೊಟ್ಟಿದ್ದಾರೆ.
ವಿಶ್ವಚಾಂಪಿಯನ್ ಹಾಗೂ 2016ರ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರಾಗಿರುವ ಪಿ.ವಿ.ಸಿಂಧು, "ಗೆಲುವು ಮತ್ತು ಸೋಲಿನ ಬಗ್ಗೆ ಯೋಚಿಸುವ ಮೊದಲು ನೀವು ಕ್ರೀಡೆಗಳನ್ನು ಆನಂದಿಸಬೇಕು. ಶಾಲಾ ಮಟ್ಟದಿಂದಲೇ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ನಿಮಗೆ ಗಂಟೆಗಟ್ಟಲೆ ತರಬೇತಿ ನೀಡಲು ಸಾಧ್ಯವಾಗದಿದ್ದರೆ ಅರ್ಧ ಗಂಟೆ ಅಥವಾ 45 ನಿಮಿಷ ಸಹ ಒಳ್ಳೆಯದು" ಎಂದರು.
ಪ್ರತಿ ಕ್ರೀಡೆಗೂ ಫಿಟ್ನೆಸ್ ಬಹಳ ಮುಖ್ಯ ಮತ್ತು ದೈಹಿಕ ವ್ಯಾಯಾಮದ ಜೊತೆಗೆ ತಾಳ್ಮೆ, ಚುರುಕುತನ ಮತ್ತು ಉತ್ತಮ ತರಬೇತಿ ಮುಖ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿರುವ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ನಿಮ್ಮ ಮಕ್ಕಳು ಯಾವುದೇ ಕ್ರೀಡೆಯನ್ನು ಇಷ್ಟ ಪಡಲಿ ಅದಕ್ಕೆ ಪ್ರೋತ್ಸಾಹ ನೀಡಿ. ನನ್ನ ಪೋಷಕರು ನನಗೆ ಬೆಂಬಲ ನೀಡಿದ್ದಕ್ಕೆ ನಾನು ಇಂದು ನಿಮಗೆ ಹೇಳುತ್ತಿದ್ದೇನೆ. ನಿಮ್ಮ ದೇಹದ ಬಗ್ಗೆ ಆಲೋಚಿಸಿ ಆಟವಾಡಿ, ಆನಂದಿಸಿ. ನೀವು ಆಟವಾಡಲು ಪ್ರಾರಂಭಿಸಿದ ಕ್ಷಣ ನೀವು ಶಿಸ್ತುಬದ್ಧವಾಗಿರಲು ಪ್ರಾರಂಭಿಸುತ್ತೀರಿ. ನೀವು ಶಿಸ್ತುಬದ್ಧವಾಗಿರಲು ಪ್ರಾರಂಭಿಸಿದ ಕ್ಷಣ ನೀವು ಉತ್ತಮವಾಗಲು ಪ್ರಾರಂಭಿಸುತ್ತೀರಿ. ನೀವು ಉತ್ತಮವಾಗಿ ಯೋಚಿಸುವ ಕ್ಷಣ ನೀವು ಮಾಡುವ ಎಲ್ಲದರಲ್ಲೂ ಉತ್ತಮವಾಗಿರುತ್ತೀರಿ. ನೀವು ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಏನು ಬೇಕಾದರೂ ಮಾಡಬಹುದು ಎಂದು ಪ್ರೇರಣೆ ನೀಡಿದರು.
ಫಿಟ್ ಇಂಡಿಯಾ ಟಾಕ್ನ ಮೊದಲ ಸೀಸನ್ನಲ್ಲಿ ಕ್ರೀಡಾ ಸಚಿವಾ ಕಿರಣ್ ರಿಜಿಜು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ಆರ್.ಪಿ ನಿಶಾಂಕ್ ಭಾವಹಿಸಿದ್ದರು.