ನವದೆಹಲಿ: ಇಂಗ್ಲೆಂಡ್ನಲ್ಲಿ ಕೊರೊನಾ ಹೊಸ ರೂಪ ಪಡೆದುಕೊಳ್ಳುತ್ತಿರುವ ಕಾರಣ ಹಲವಾರು ದೇಶಗಳು ಇಂಗ್ಲೆಂಡ್ನಿಂದ ವಿಮಾನಯಾನ ನಿಷೇಧಿಸಿವೆ. ಆದರೆ, ವಿಶ್ವಚಾಂಪಿಯನ್ ಶಟ್ಲರ್ ಪಿವಿ ಸಿಂಧು ತಾವೂ ಥಾಯ್ಲೆಂಡ್ಗೆ ಪ್ರಯಾಣ ಬೆಳೆಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಸಿಂಧು ಈಗಾಗಲೆ ಟೋಕಿಯೋ ಒಲಿಂಪಿಕ್ಸ್ಗೆ ಕ್ವಾಲಿಫೈಯ್ಡ್ ಆಗಿದ್ದಾರೆ. ಅದಕ್ಕಾಗಿ ತರಬೇತಿ ಪಡೆಯಲು ಸಿಂಧು ಕಳೆದ ಎರಡು ತಿಂಗಳ ಲಂಡನ್ನಲ್ಲಿ ಉಳಿದುಕೊಂಡಿದ್ದಾರೆ. ಇದೀಗ ಲಾಕ್ಡೌನ್ ನಂತರ ಸಿಂಧು ತಮ್ಮ ಮೊದಲ ಟೂರ್ನಮೆಂಟ್ನಲ್ಲಿ ಪಾಲ್ಗೊಳ್ಳಲಿ ಥಾಯ್ಲೆಂಡ್ಗೆ ತೆರಳಲಿದ್ದಾರೆ. ನಂತರ ಎರಡು ಸೂಪರ್ 1000 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್ಗೆ ತೆರಳಲಿದ್ದಾರೆ. ಈ ಟೂರ್ನಿ ಜನವರಿ 12 ರಿಂದ 17ರ ವರೆಗೆ ಮತ್ತು ಜನವರಿ 19ರಿಂದ 24ರವರೆಗೆ ನಡೆಯಲಿದೆ.
" ನಾನು ಜನವರಿ ಮೊದಲ ವಾರದಲ್ಲಿ ಪ್ರಯಾಣಿಸಲು ಯೋಜಿಸಿದ್ದೇನೆ. ಥಾಯ್ಲೆಂಡ್ನಲ್ಲಿ ಇಂಗ್ಲೆಂಡ್ನಿಂದ ಪ್ರಯಾಣಿಸಲು ಯಾವುದೇ ನಿಷೇಧವಿಲ್ಲ, ಆದ್ದರಿಂದ ನಾನು ದೋಹಾದಿಂದ ಪ್ರಯಾಣಿಸಬಹುದು. ಥಾಯ್ಲೆಂಡ್ ತಲುಪಲು ಗಲ್ಫ್ ಮಾರ್ಗವನ್ನು ಬಳಸುವುದು ಇದರ ಆಲೋಚನೆಯಾಗಿದೆ" ಎಂದು ಪಿವಿ ಸಿಂಧು ತಿಳಿಸಿದ್ದಾರೆ.
"ಅದೃಷ್ಟವಶಾತ್, ನನ್ನ ತರಬೇತಿ ಬಹಳ ಚೆನ್ನಾಗಿ ನಡೆಯುತ್ತಿದೆ. ರಾಷ್ಟ್ರೀಯ ಕೇಂದ್ರವನ್ನು ಮುಚ್ಚಲಾಗಿಲ್ಲ. ಇದನ್ನು ಬಬಲ್ ಕೇಂದ್ರವಾಗಿ ನಡೆಸಲಾಗುತ್ತಿದೆ, ಆದ್ದರಿಂದ ಥಾಯ್ಲೆಂಡ್ನಲ್ಲಿ ನಡೆಯುವ ಟೂರ್ನಿಗಿಂತ ಮುಂಚಿತವಾಗಿ ಅಭ್ಯಾಸ ಮಾಡಲು ನನಗೆ ಸಾಧ್ಯವಾಗಿದೆ " ಎಂದು ಸಿಂಧು ಹೇಳಿದ್ದಾರೆ.
ಇಂಗ್ಲೆಂಡ್ನಲ್ಲಿ ಕೊರೊನಾ ವೈರಸ್ ಹೊಸ ರೂಪ ಕಂಡುಕೊಳ್ಳುತ್ತಿದೆ. ಈ ಕಾರಣದಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ದೇಶಗಳು ಯುಕೆಯಿಂದ ವಿಮಾನ ಹಾರಾಟ ನಿಷೇಧಿಸಿವೆ.