ಒಡೆನ್ಸ್ (ಡೆನ್ಮಾರ್ಕ್): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟುಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅಕ್ಟೋಬರ್ 13ರಿಂದ ಒಡೆನ್ಸ್ನಲ್ಲಿ ಆರಂಭವಾಗಲಿರುವ ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಮೆಂಟ್ನಿಂದ ಹೊರ ಬಂದಿದ್ದಾರೆ.
ಕೊರೊನಾದಿಂದ ಕಳೆದ ಆರು ತಿಂಗಳಿಂದ ಎಲ್ಲಾ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಸ್ಥಗಿತಗೊಂಡಿವೆ. ಅಕ್ಟೋಬರ್ನಿಂದ ಅಂತಾರಾಷ್ಟ್ರೀಯ ಕ್ಯಾಲೆಂಡರ್ ಅನ್ನು ಮರುಪ್ರಾರಂಭಿಸಲು ಡೆನ್ಮಾರ್ಕ್ ಓಪನ್, ಡೆನ್ಮಾರ್ಕ್ ಮಾಸ್ಟರ್ಸ್ ಹಾಗೂ ಥಾಮಸ್ -ಉಬರ್ ಕಪ್ ಫೈನಲ್ ಟೂರ್ನಮೆಂಟ್ಗಳನ್ನು ಆಯೋಜಿಸಲು ಬಿಡಬ್ಲ್ಯೂಎಫ್ ನಿರ್ಧರಿಸಿತ್ತು. ಆದರೆ ಕೊರೊನಾ ಬಿಕ್ಕಟ್ಟಿನ ನಡುವೆ ಪ್ರಸ್ತುತ ಕೇವಲ ಡೆನ್ಮಾರ್ಕ್ ಓಪನ್ ಟೂರ್ನಮೆಂಟ್ ಮಾತ್ರ ಆಯೋಜಿಸುತ್ತಿದೆ. ಈ ಕಾರಣದಿಂದ ಈ ಟೂರ್ನಿಯಲ್ಲಿ ಭಾಗವಹಿಸದಿರಲು ಸೈನಾ ದಂಪತಿ ನಿರ್ಧರಿಸಿದ್ದಾರೆ.
"ನಾನು ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದಿದ್ದೇನೆ. ಮುಂದಿನ ವರ್ಷದ ಏಷ್ಯಾ ಟೂರ್ನ ಮೂಲಕ ಮತ್ತೆ ಹೊಸ ಋತುವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇನೆ" ಎಂದು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸೈನಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು ಈ ದಂಪತಿ 75,000 ಡಾಲ್ ಬಹುಮಾನ ಮೊತ್ತದ ಟೂರ್ನಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಬ್ಯಾಡ್ಮಿಂಟನ್ ಆಫ್ ಇಂಡಿಯಾಗೆ ಟೂರ್ನಿಯಲ್ಲಿ ಭಾಗವಹಿಸಲು ತಮಗೆ ಒಪ್ಪಿಗೆ ಪತ್ರ ಸಲ್ಲಿಸಿದ್ದರು.
ಫಿಟ್ನೆಸ್ ಸಂಬಂಧಿಸಿದಂತೆ ಏನಾದರೂ ಸಮಸ್ಯೆ ಇದೆಯೇ ಎಂದು ಕೇಳಿದ್ದಕ್ಕೆ, ಯಾವುದೇ ಗಾಯದ ಸಮಸ್ಯೆಯಿಲ್ಲ, ಮೂರು ಟೂರ್ನಮೆಂಟ್ಗಳಿದ್ದರೆ ಭಾಗವಹಿಸುವುದಲ್ಲಿ ಅರ್ಥವಿರುತ್ತಿತ್ತು. ನಾನು ನೇರವಾಗಿ ಜನವರಿಯಿಂದ ಏಷ್ಯನ್ ಪ್ರವಾಸಗಕ್ಕೆ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಮೊದಲು ಬಿಡಬ್ಲ್ಯೂಎಫ್ ಮೂರು ಟೂರ್ನಮೆಂಟ್ಗಳ ಆಯೋಜನೆಯ ಮೂಲಕ ಬ್ಯಾಡ್ಮಿಂಟನ್ ಅನ್ನು ಮರುಪ್ರಾರಂಭಿಸಲು ತೀರ್ಮಾನಿಸಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕ ಕಾರಣದಿಂದ ಪ್ರಸ್ತುತ ಡೆನ್ಮಾರ್ಕ್ ಓಪನ್ ಮಾತ್ರ ಆಯೋಜಿಸಲು ನಿರ್ಧರಿಸಿದೆ. ಹಾಗಾಗಿ ಸೈನಾ ಹಾಗೂ ಕಶ್ಯಪ್ ಈ ಸಂದರ್ಭದಲ್ಲಿ ಒಂದು ಟೂರ್ನಿಗಾಗಿ ತೊಂದರೆ ತೆಗೆದುಕೊಳ್ಳುವುದು ಬೇಡ ಎಂದು ಟೂರ್ನಿಯಿಂದಲೇ ಹೊರಬಂದಿದ್ದಾರೆ.