ಕ್ವಾಲಾಲಂಪುರ: ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮಲೇಷ್ಯಾ ಮಾಸ್ಟರ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಒಲಿಂಪಿಕ್ ಬೆಳ್ಳಿಪದಕ ವಿಜೇತೆ ಪಿವಿ ಸಿಂಧು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಎವ್ಗೆನಿಯಾ ಕೊಸೆಟ್ಸಾಕಾಯಾ ವಿರುದ್ಧ 21-15, 21-13ರಲ್ಲಿ ಗೆಲುವು ಸಾಧಿಸಿದರು. ಸಿಂಧು ಎವ್ಗೆನಿಯಾರನ್ನು ಕೇವಲ 35 ನಿಮಿಷಗಳಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಸಿದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್ ಬೆಲ್ಜಿಯಂನ ಲಿಯಾನ್ನೆ ತಾನ್ ಅವರನ್ನು 21-15,21-17ರಲ್ಲಿ ಮಣಿಸಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದರು.
ಆದರೆ ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಅವರು ಚೀನಾದ ತೈಪೆಯ ಚೋ ತೈನ್ ಚೆನ್ ವಿರುದ್ಧ ಸೋಲನುಭವಿಸಿ ನಿರಾಶೆ ಅನುಭವಿಸಿದರು. ಶ್ರೀಕಾಂತ್ 17-21, 5-21 ರಲ್ಲಿ ತೈನ್ ಚೆನ್ಗೆ ಶರಣಾದರೆ, ಸಾಯಿ ಪ್ರಣೀತ್ ಡೆನ್ಮಾರ್ಕ್ನ ರಾಸ್ಮಸ್ ಗೆಮ್ಕೆ ವಿರುದ್ಧ 21-11, 21-15ರಲ್ಲಿ ಸೋಲನುಭವಿಸಿದರು.