ಒಡೆನ್ಸ್: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಪಿ ವಿ ಸಿಂಧು ಡೆನ್ಮಾರ್ಕ್ ಓಪನ್ ಸೂಪರ್ 1000 ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಅನ್ ಸೆ ಯಂಗ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಬಳಿಕ ಸಿಂಧು ಇದೇ ಮೊದಲ ಟೂರ್ನಮೆಂಟ್ನಲ್ಲಿ ಭಾಗವಹಿಸಿದ್ದರು. ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಅವರು ಪ್ರಶಸ್ತಿ ಜಯಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ 8ನೇ ಶ್ರೇಯಾಂಕದ ಸೆ ಯಂಗ್ ವಿರುದ್ಧ 1-21,12-21ರಿಂದ ಕೇವಲ 36 ನಿಮಿಷಗಳಲ್ಲಿ ಸೋಲು ಕಂಡು ನಿರಾಶೆಯನುಭವಿಸಿದರು.
ಸಿಂಧು ಅನ್ ಸೇ ಯಂಗ್ ವಿರುದ್ಧ ಎರಡು ವರ್ಷಗಳ ಹಿಂದೆ ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲೂ ಅವರು ನೇರ ಸೆಟ್ಗಳಿಂದಲೇ ಸೋಲು ಕಂಡಿದ್ದರು.
ಪುರುಷರ 2ನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್ನ ಆ್ಯಂಡರ್ಸ್ ಆ್ಯಂಟನ್ಸನ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ್ದ ಸಮೀರ್ ವರ್ಮಾ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದರು. ಅವರು ಇಂಡೋನೇಷ್ಯಾದ ಟಾಮಿ ಸುಗಿರಿಟೋ ವಿರುದ್ಧ ಮೊದಲ ಗೇಮ್ನಲ್ಲಿ 17-21ರಿಂದ ಸೋಲು ಕಂಡಿದ್ದರು. ಆದರೆ ಎರಡನೇ ಇನ್ನಿಂಗ್ಸ್ ವೇಳೆ ಆಟದಿಂದ ಹೊರ ನಡೆದರು.
ಪಿ ವಿ ಸಿಂಧು ಮತ್ತು ಸಮೀರ್ ವರ್ಮಾ ಸೋಲುಗಳೊಂದಿಗೆ ಭಾರತದ ಸವಾಲು ಡೆನ್ಮಾರ್ಕ್ ಓಪನ್ನಲ್ಲಿ ಅಂತ್ಯವಾಯಿತು. ಭಾರತದಿಂದ ಒಟ್ಟು 9 ಸಿಂಗಲ್ಸ್ ಆಟಗಾರರು, ಪುರುಷರ ಡಬಲ್ಸ್ನಲ್ಲಿ 3, ಮಹಿಳೆಯರ ಡಬಲ್ಸ್ನಲ್ಲಿ 2 ಜೋಡಿ ಮತ್ತು ಮಿಕ್ಸಡ್ ಡಬಲ್ಸ್ನಲ್ಲಿ2 ಜೋಡಿ ಭಾಗವಹಿಸಿದ್ದವು. ಆದರೆ ಯಾರೊಬ್ಬರು ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ.
ಇದನ್ನು ಓದಿ: ಕೊಹ್ಲಿ, ರೋಹಿತ್ ಅಲ್ಲ, ಈ ಆಟಗಾರ ಭಾರತದ ಮ್ಯಾಚ್ ವಿನ್ನರ್ : ವಾಸಿಂ ಅಕ್ರಮ್