ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿಯಲ್ಲಿ ನಾಯಕಿ ಕಮಲಿಯ ತಂದೆ ಚಂದ್ರು ಆಗಿ ನಟಿಸುತ್ತಿರುವ ನಟ ಮಿಥುನ್ ತೇಜಸ್ವಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಬಳಿ ಒಂದು ಮನವಿ ಮಾಡಿದ್ದಾರೆ.
ಪ್ರಸ್ತುತ ಸನ್ನಿವೇಶದ ಕುರಿತು ಮಾತನಾಡಿರುವ ಮಿಥುನ್ ತೇಜಸ್ವಿ, ಕೊರೊನಾ ತಗುಲಿರುವ ವ್ಯಕ್ತಿ ನಿಮ್ಮ ನೆರೆಹೊರೆಯವರೇ ಆಗಿರಬಹುದು ಅಥವಾ ನಿಮ್ಮ ಕಾರ್ಯಕ್ಷೇತ್ರದ ಹತ್ತಿರವೇ ಇರಬಹುದು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅವರ ಫೋಟೋ ಆಗಲಿ ವಿಡಿಯೋ ಆಗಲಿ ತೆಗೆಯುವ ಮೂಲಕ ಆ ವ್ಯಕ್ತಿಯನ್ನು ಗಾಬರಿಗೊಳಿಸಬೇಡಿ. ಅದರ ಬದಲು ದೂರದಲ್ಲಿ ನಿಂತು ಅವರನ್ನು ಬೇಗ ಗುಣಮುಖರಾಗಿ ಬರುವಂತೆ ಹಾರೈಸಿ ಇದರಿಂದ ಅವರಿಗೆ ಧೈರ್ಯ ತುಂಬಿದಂತೆ ಆಗುತ್ತದೆ ಎಂದು ಮಿಥುನ್ ಹೇಳಿದ್ದಾರೆ.
ಕೊರೊನಾ ವೈರಸ್ಗೆ ಒಳಗಾದ ವ್ಯಕ್ತಿ ಅಪರಾಧಿಯಲ್ಲ. ಅವರು ಬೇಗ ಗುಣಮುಖರಾಗುತ್ತಾರೆ. ಅವರಿಗೆ ಬೇಕಾಗಿದ್ದು ಧೈರ್ಯ ಹಾಗೂ ಜನರು ಆತನನ್ನು ಹೇಗೆ ಆಧರಿಸುತ್ತಾರೆ ಎಂಬುದು ಬಹಳ ಮುಖ್ಯ. ಈ ಮಹಾಮಾರಿಯ ವಿರುದ್ಧ ನಾವೆಲ್ಲರೂ ಒಟ್ಟಿಗೆ ಸೇರಿ ಹೋರಾಡೋಣ, ಪ್ರೀತಿಯನ್ನು ಹಂಚೋಣ, ವಿಶ್ವಾಸವನ್ನು ಬೆಳೆಸೋಣ, ಎಲ್ಲರೂ ಸುರಕ್ಷಿತವಾಗಿರಿ' ಎಂದು ಮಿಥುನ್ ಮನವಿ ಮಾಡಿದ್ದಾರೆ.