'ಅಗ್ನಿ ಸಾಕ್ಷಿ' ಧಾರಾವಾಹಿಯ ಸನ್ನಿಧಿ ಮದುಮಗಳಾಗಿ ಮಿಂಚಿತ್ತಿದ್ದಾರೆ. ಅರೇ! ಸನ್ನಿಧಿಗೆ ಮದುವೇನಾ? ಹುಡುಗ ಯಾರು? ಯಾವಾಗ ಮದುವೆ? ಎಂದೆಲ್ಲಾ ಯೋಚಿಸಬೇಡಿ. ನಿಮ್ಮ ನೆಚ್ಚಿನ ಸನ್ನಿಧಿ ಮದುಮಗಳಾಗಿ ತಯಾರಾಗಿರುವುದು ನಿಜ. ಆದರೆ, ಅವರು ಹಸೆಮಣೆ ಏರುತ್ತಿಲ್ಲ. ಬದಲಿಗೆ ಫೋಟೋ ಶೂಟ್ಗಾಗಿ ಮಾತ್ರ ಮದುಮಗಳ ತರಹ ಅಲಂಕಾರ ಮಾಡಿಕೊಂಡಿದ್ದಾರೆ.
ಕಳೆದ ಆರು ವರ್ಷಗಳಿಂದ 'ಅಗ್ನಿಸಾಕ್ಷಿ'ಯ ಸನ್ನಿಧಿಯಾಗಿ ವೀಕ್ಷಕರ ಮನ ಸೆಳೆಯುತ್ತಿದ್ದ ಚೆಂದುಳ್ಳಿ ಚೆಲುವೆಯ ಹೆಸರು ವೈಷ್ಣವಿ ಗೌಡ. 'ಅಗ್ನಿಸಾಕ್ಷಿ' ಎಂದರೆ ಸನ್ನಿಧಿ, ಸನ್ನಿಧಿ ಎಂದರೆ 'ಅಗ್ನಿಸಾಕ್ಷಿ' ಎಂಬಷ್ಟರ ಮಟ್ಟಿಗೆ ಪ್ರಸಿದ್ಧಿಯಾಗಿದ್ದಾರೆ ವೈಷ್ಣವಿ ಗೌಡ. ಹಲವರಿಗೆ ಅವರ ನಿಜವಾದ ಹೆಸರು ವೈಷ್ಣವಿ ಎಂಬುದು ತಿಳಿದಿಲ್ಲ. ಅಷ್ಟರ ಮಟ್ಟಿಗೆ ಅವರ ಪಾತ್ರ ವೀಕ್ಷಕರಿಗೆ ಮೋಡಿ ಮಾಡಿದೆ.
ಇದೀಗ 'ಅಗ್ನಿಸಾಕ್ಷಿ' ಧಾರಾವಾಹಿ ಮುಕ್ತಾಯಗೊಂಡು ಒಂದು ವಾರಗಳೇ ಕಳೆದಿವೆ. ನಿರಂತರ 6 ವರ್ಷಗಳ ಕಾಲ ಸನ್ನಿಧಿಯಾಗಿ ನಿಮ್ಮ ಮುಂದೆ ಬರುತ್ತಿದ್ದ ವೈಷ್ಣವಿ ಅವರಿಗೆ ಇದೀಗ ಕೊಂಚ ಮಟ್ಟಿಗೆ ನಟನೆಯಿಂದ ಬ್ರೇಕ್ ಸಿಕ್ಕಿದೆ. ಆ ಗ್ಯಾಪ್ನಲ್ಲಿ ಅದ್ದೂರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಮದುಮಗಳ ಲುಕ್ಗೆ ಪ್ರೇಕ್ಷಕ ವರ್ಗ ಫಿದಾ ಆಗಿದೆ. ಕೇವಲ ಫೋಟೋ ಮಾತ್ರವಲ್ಲದೇ ವಿಡಿಯೋ ಒಂದನ್ನು ಕೂಡಾ ಇನ್ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.