ಮೊದಲೆಲ್ಲಾ ದೂರದರ್ಶನ ಬಿಟ್ಟರೆ ಖಾಸಗಿ ವಾಹಿನಿಗಳು ಇರಲಿಲ್ಲ. ಆದ್ದರಿಂದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುತ್ತಿರಲಿಲ್ಲ. ಈಗ ಸೋಷಿಯಲ್ ಮೀಡಿಯಾ, ಖಾಸಗಿ ವಾಹಿನಿಗಳು ಬೇಕಾದಷ್ಟಿವೆ. ಎಲೆಮರೆ ಕಾಯಿಯಂತೆ ಇರುವವರು, ಅದರಲ್ಲೂ ಬಾಲನಟರು ತಮ್ಮ ಪ್ರತಿಭೆಗಳನ್ನು ತೋರಿಸಲು ಅನೇಕ ರಿಯಾಲಿಟಿ ಶೋಗಳು ಸಹಾಯಕವಾಗಿವೆ.
ಈ ರಿಯಾಲಿಟಿ ಶೋಗಳ ಮೂಲಕವೇ ಎಷ್ಟೋ ಪ್ರತಿಭೆಗಳು ವೀಕ್ಷಕರಿಗೆ ಪರಿಚಯವಾಗಿದ್ದಾರೆ. ಜೀ ವಾಹಿನಿಯ ಜನಪ್ರಿಯ ಡ್ರಾಮಾ ಜ್ಯೂನಿಯರ್ ಶೋ ಮೂಲಕ ಕನ್ನಡಿಗರ ಮನ ಗೆದ್ದ ಪ್ರತಿಭೆಯೊಂದು ಈಗ ಕನ್ನಡ ಚಿತ್ರರಂಗದಲ್ಲಿ ಕೂಡಾ ಮಿಂಚಲು ಹೊರಟಿದ್ದಾನೆ. ಯಾರು ಆ ಬಾಲ ನಟ ಅಂತೀರಾ...? ಪ್ರತಿ ಎಪಿಸೋಡ್ನಲ್ಲೂ ವಿವಿಧ ರೀತಿಯ ವೇಷ ಭೂಷಣ ತೊಟ್ಟು, ಪಂಚಿಂಗ್ ಡೈಲಾಗ್ಗಳಿಂದಲೇ ಚಪ್ಪಾಳೆ ಗಿಟ್ಟಿಸಿದ ಪುಟಾಣಿ ಅನುರಾಗ್.
ಪಟ ಪಟ ಅಂತಾ ಮಾತನಾಡುವ ಅನುರಾಗ್, ಭವಿಷ್ಯದಲ್ಲಿ, ಹೀರೋ ಆಗುವ ಎಲ್ಲಾ ಲಕ್ಷಣಗಳು ಇವೆ. ಸದ್ಯ ಸೈಕಾಲಜಿಕಲ್ ಥ್ರಿಲ್ಲರ್ 'ಫ್ಯಾಂಟಸಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅನುರಾಗ್ ನಟಿಸುತ್ತಿದ್ದಾರೆ. ಡ್ರಾಮಾ ಜ್ಯೂನಿಯರ್ ಶೋ ಮುಗಿಸಿದಾಗ ಅನುರಾಗ್ಗೆ ಮೊದಲು ಅವಕಾಶ ದೊರೆತದ್ದು, ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಧಾರಾವಾಹಿಯಲ್ಲಿ. ಈ ಧಾರಾವಾಹಿಯಲ್ಲಿ ಅನುರಾಗ್ ನಟಿಸಿಲ್ಲ. ಆದರೆ ಪುಟ್ಟ ಭೀಮರಾವ್ ಪಾತ್ರಕ್ಕೆ ಅನುರಾಗ್ ಧ್ವನಿ ನೀಡಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾನೆ.
ಅನುರಾಗ್ಗೆ ಈ 'ಮಹಾನಾಯಕ' ಧಾರಾವಾಹಿ ಬಹಳ ಸ್ಫೂರ್ತಿ ನೀಡಿದೆಯಂತೆ. ಈ ಧಾರಾವಾಹಿಯಲ್ಲಿ ಪುಟ್ಟ ಭೀಮರಾವ್ ತಮ್ಮ ಕುಟುಂಬದವರ ಬಗ್ಗೆ ತೋರಿಸುವ ಕಾಳಜಿ, ಊರಿನವರಿಗೆ ಸಹಾಯ ಮಾಡುವ ಗುಣ ಅನುರಾಗ್ಗೆ ಬಹಳ ಇಷ್ಟವಾಯ್ತಂತೆ. ಅವರು ಅಷ್ಟು ಓದಿದಕ್ಕೆ ನಮ್ಮ ದೇಶದ ಸಂವಿಧಾನ ರಚಿಸಿದರು ಈ ಸೀರಿಯಲ್ ನೋಡಿ ನಾನೂ ಕೂಡಾ ಸಾಧನೆ ಮಾಡಬೇಕೆಂಬ ಛಲ ಹುಟ್ಟಿದೆ ಎನ್ನುತ್ತಾನೆ ಈ ಪುಟಾಣಿ.
ಈ ಸೀರಿಯಲ್ಗೆ ಡಬ್ಬಿಂಗ್ ಮಾಡುವಾಗ ಅನುರಾಗ್ಗೆ ಅಳು ಬರುತ್ತಿತ್ತಂತೆ. ಅದೇ ರೀತಿ ಖುಷಿ ಕೂಡಾ ಆಗುತ್ತಿತ್ತಂತೆ. ಜನರಿಗೆ ನನ್ನ ಧ್ವನಿ ಇಷ್ಟವಾಗುತ್ತದೆ ಎಂದುಕೊಂಡಿರಲಿಲ್ಲ. ಈ ಧಾರಾವಾಹಿ ಮೂಲಕ ನನಗೆ ಪ್ರಶಸ್ತಿ ಬಂದಾಗಿನಿಂದ ಎಲ್ಲಿ ಹೋದರೂ ನನ್ನನ್ನು ಗುರುತಿಸುತ್ತಾರೆ. ಈ ಧಾರಾವಾಹಿಗೆ ಧ್ವನಿ ನೀಡುತ್ತಿರುವುದಕ್ಕೆ ನನಗೆ ಬಹಳ ಖುಷಿ ಇದೆ. ತನ್ನ ತಂದೆ ಸಂತೋಷ್. ಬಿ ಪಾಟೀಲ್ ಹಾಗೂ ತಾಯಿ ಕಲಾವತಿ ನನಗೆ ಬಹಳ ಪ್ರೋತ್ಸಾಹ ನೀಡುತ್ತಾರೆ ಎಂದು ಖುಷಿಯಿಂದ ಹೇಳುತ್ತಾನೆ ಈ ಬಾಲನಟ.
ಆ್ಯಕ್ಟಿಂಗ್ ಜೊತೆಗೆ ಓದಿನಲ್ಲಿ ಕೂಡಾ ಮುಂದಿರುವ ಅನುರಾಗ್ಗೆ ಆನ್ಲೈನ್ ಕ್ಲಾಸ್ ಇರುವುದರಿಂದ ಓದಲು ತೊಂದರೆ ಆಗುತ್ತಿಲ್ಲವಂತೆ. ಶಿಕ್ಷಕರು ಹಾಗೂ ಸ್ನೇಹಿತರು ಕೂಡಾ ನನಗೆ ಬೆಂಬಲ ನೀಡುತ್ತಾರೆ ಎಂದು ಖುಷಿಯಿಂದ ಹೇಳುತ್ತಾನೆ ಈ ಮುದ್ದು ಹುಡುಗ. ಯಶ್, ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ರವಿಚಂದ್ರನ್ ಅವರೊಂದಿಗೆ ನಟಿಸಬೇಕೆಂಬುದು ಅನುರಾಗ್ ಆಸೆಯಂತೆ.
ಇಷ್ಟು ಚಿಕ್ಕ ವಯಸ್ಸಿಗೆ ಕನ್ನಡಿಗರ ಪ್ರೀತಿ ಸಂಪಾದಿಸಿ ಭವಿಷ್ಯದಲ್ಲಿ ಇನ್ನೂ ಸಾಧನೆ ಮಾಡಬೇಕೆಂದು ಆಸೆ ಹೊತ್ತಿರುವ ಈ ಪುಣಾಣಿ ಕನಸು ನನಸಾಗಲಿ ಎಂದು ಹಾರೈಸೋಣ.