ಮಾತಿನ ಮೂಲಕ ಇತರರನ್ನು ಸೆಳೆಯುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ವೀಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟಿರುವ ನಿರೂಪಕರ ಮಾತುಗಾರಿಕೆಗೆ ಮನಸೋಲದವರಿಲ್ಲ. ನಿರೂಪಣೆ ಮೂಲಕ ಕಿರುತೆರೆ ರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಈ ನಿರೂಪಕರು ಕೇವಲ ನಿರೂಪಣೆ ಮಾಡುವುದು ಮಾತ್ರವಲ್ಲ, ನಟನಾ ರಂಗದಲ್ಲಿಯೂ ಮಿಂಚಿದ್ದಾರೆ.
ಅನುಶ್ರೀ
ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮದ ಮೂಲಕ ನಿರೂಪಣೆ ಕ್ಷೇತ್ರಕ್ಕೆ ಬಂದ ಅನುಶ್ರೀ ನಂತರ ಚಿನ್ನದ ಬೇಟೆ, ಕುಣಿಯೋಣು ಬಾರಾ, ಸರಿಗಮಪ ಸೇರಿದಂತೆ ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡಿ ವೀಕ್ಷಕರ ಮನ ಸೆಳೆದಿದ್ದಾರೆ. ನಿರೂಪಣೆ ಜೊತೆಗೆ ನಟನಾ ರಂಗದಲ್ಲಿಯೂ ಛಾಪು ಮೂಡಿಸಿರುವ ಕರಾವಳಿ ಕುವರಿ ಅನುಶ್ರೀ 'ಬೆಂಕಿಪಟ್ಣ' ಸಿನಿಮಾದಲ್ಲಿ ನಟಿಸಿದ್ದಾರೆ. ಮಾತ್ರವಲ್ಲ 'ರಿಂಗ್ ಮಾಸ್ಟರ್' ಮತ್ತು 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿಯೂ ಅನುಶ್ರೀ ಬಣ್ಣ ಹಚ್ಚಿದ್ದಾರೆ. ಜೊತೆಗೆ 'ಕೋರಿ ರೊಟ್ಟಿ' ಎಂಬ ತುಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಸೃಜನ್ ಲೋಕೇಶ್
ಮಜಾ ವಿತ್ ಸೃಜಾ, ಡ್ಯಾಡಿ ನಂ 1, ಕಾಸ್ಗೆ ಟಾಸ್, ಮಜಾ ಟಾಕೀಸ್ ಕಾರ್ಯಕ್ರಮದ ನಿರೂಪಕರಾಗಿ ಟಾಕಿಂಗ್ ಸ್ಟಾರ್ ಎನಿಸಿಕೊಂಡಿರುವ ಸೃಜನ್ ಲೋಕೇಶ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನೀಲಮೇಘಶ್ಯಾಮ, ಆನೆ ಪಟಾಕಿ, ಹ್ಯಾಪಿ ಜರ್ನಿ, ಸಪ್ನೋ ಕಿ ರಾಣಿ, ಎಲ್ಲಿದ್ದೆ ಇಲ್ಲಿ ತನಕ ಸಿನಿಮಾಗಳಲ್ಲಿ ಸೃಜನ್ ಲೋಕೇಶ್ ನಾಯಕರಾಗಿ ನಟಿಸಿದ್ದಾರೆ. ನಟನೆ ಜೊತೆಗೆ ನಾನೊಬ್ಬ ಒಳ್ಳೆ ನಿರೂಪಕ ಎಂಬುದನ್ನು ಸೃಜನ್ ನಿರೂಪಿಸಿದ್ದಾರೆ.
ಮಾಸ್ಟರ್ ಆನಂದ್
ಬಾಲನಟನಾಗಿ ಬಣ್ಣದ ಲೋಕದಲ್ಲಿ ಕಮಾಲ್ ಮಾಡಿದ ಮತ್ತೋರ್ವ ಪ್ರತಿಭೆ ಮಾಸ್ಟರ್ ಆನಂದ್. ವಿಭಿನ್ನ ನಟನಾ ಶೈಲಿಯ ಮೂಲಕ ವೀಕ್ಷಕರ ಮನ ಸೆಳೆದಿರುವ ಮಾಸ್ಟರ್ ಅನಂದ್ ಅವರು ನಿರೂಪಣೆ ಆರಂಭಿಸಿದ ನಂತರ ಜನರಿಗೆ ಇನ್ನೂ ಹತ್ತಿರವಾದರು. ಕಾಮಿಡಿ ಕಿಲಾಡಿಗಳು ಮತ್ತು ಡ್ರಾಮಾ ಜ್ಯೂನಿಯರ್ಸ್ ನಿರೂಪಕ ಮಾಸ್ಟರ್ ಆನಂದ್, ಕೆಲವೊಂದು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.
ಅಕುಲ್ ಬಾಲಾಜಿ
ಪ್ಯಾಟೆ ಹುಡ್ತೀರ್ ಹಳ್ಳಿ ಲೈಫು, ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಡ್ಯಾನ್ಸಿಂಗ್ ಸ್ಟಾರ್, ತಕಧಿಮಿತ ಹೀಗೆ ಅನೇಕ ಕಾರ್ಯಕ್ರಮಗಳ ನಿರೂಪಕರಾಗಿ ಜನರ ಮನ ಸೆಳೆದಿರುವ ಅಕುಲ್ ಬಾಲಾಜಿ ಕೂಡಾ ಹಿರಿತೆರೆಯಲ್ಲಿ ಮಿಂಚಿದ್ದಾರೆ. ಆತ್ಮೀಯ, ವಾಸ್ತವ, ಬನ್ನಿ, ಮೈನಾ, ಕ್ರೇಜಿಸ್ಟಾರ್ ಸೇರಿ ಅನೇಕ ಸಿನಿಮಾಗಳಲ್ಲಿ ಅಕುಲ್ ನಾಯಕನಾಗಿ ಮಿಂಚಿದ್ದಾರೆ. ಅನೇಕ ಅವಾರ್ಡ್ ಕಾರ್ಯಕ್ರಮಗಳನ್ನು ಅಕುಲ್ ನಡೆಸಿಕೊಟ್ಟಿದ್ದಾರೆ.
ಇವರೊಂದಿಗೆ ಶ್ವೇತಾ ಚಂಗಪ್ಪ, ಸುಜಾತ, ನಿರಂಜನ್ ದೇಶಪಾಂಡೆ, ಕಾವ್ಯ, ಚಂದನಾ ಅನಂತಕೃಷ್ಣ, ಅನುಪಮಾ ಗೌಡ, ಸುಷ್ಮಾ ರಾವ್ ಇವರೆಲ್ಲಾ ನಿರೂಪಣೆ ಜೊತೆ ಆ್ಯಕ್ಟಿಂಗ್ನಲ್ಲೂ ಮುಂದಿದ್ದಾರೆ.