ಪ್ರತಿ ವರ್ಷದಂತೆ ಈ ವರ್ಷವೂ ಸಹ ಅನುಬಂಧ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದ್ದು, ಕಿರುತೆರೆ ವೀಕ್ಷಕರ ಮನ ಸೆಳೆಯಿತು. ಅನುಬಂಧ ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಅತ್ಯುತ್ತಮ ನಟಿ, ನಟ, ಅಪ್ಪ - ಅಮ್ಮ, ಅತ್ತೆ-ಮಾವ, ಮನ ಮೆಚ್ಚಿದ ಹಿರಿಯ, ಖಳನಟಿ, ಖಳನಟ, ಸಹೋದರ, ಸಹೋದರಿ, ಧಾರಾವಾಹಿ, ನಾನ್ ಫಿಕ್ಷನ್ ಹೀಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
2019ನೇ ಸಾಲಿನ ಅನುಬಂಧ ಅವಾರ್ಡ್ ಯಾರ ಯಾರ ಮುಡಿಗೆ ಏರಿದೆ ?
ಮನ ಮೆಚ್ಚಿದ ಸಹೋದರ ಪ್ರಶಸ್ತಿಯನ್ನು ರಕ್ಷಾಬಂಧನ ಧಾರಾವಾಹಿಯ ಕಾರ್ತಿಕ್ ಪಡೆದಿದ್ದರೆ, ಮನ ಮೆಚ್ಚಿದ ಸಹೋದರಿ ಪ್ರಶಸ್ತಿಯನ್ನು ರಂಗನಾಯಕಿಯಾ ಛಾಯಾ ಪಡೆದಿದ್ದಾರೆ. ಇನ್ನು ಮನ ಮೆಚ್ಚಿದ ಮಾವ ಪ್ರಶಸ್ತಿ ಸೀತಾವಲ್ಲಭ ಧಾರಾವಾಹಿಯ ದೇವರಾಜ್ ಹಾಗೂ ಮನ ಮೆಚ್ಚಿದ ಅತ್ತೆ ಮಿಥುನ ರಾಶಿಯ ಗಿರಿಜಾ ಅವರಿಗೆ ದೊರಕಿದೆ.
ಮನ ಮೆಚ್ಚಿದ ಮಗ ಪ್ರಶಸ್ತಿ ಮಂಗಳ ಗೌರಿ ಮದುವೆಯ ರಾಜೀವ ವಶವಾದರೆ, ಮನ ಮೆಚ್ಚಿದ ಸೊಸೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಚ್ಚಿ, ಮನ ಮೆಚ್ಚಿದ ಮಗಳು ಮಂಗಳ ಗೌರಿ ಮದುವೆಯ ಮಂಗಳ, ಮನೆ ಮೆಚ್ಚಿದ ಅಳಿಯ ನಮ್ಮನೆ ಯುವರಾಣಿಯ ಸಾಕೇತ್ ಪಡೆದಿದ್ದಾರೆ. ಇನ್ನು ಹಿರಿಯರು ಪ್ರಶಸ್ತಿ ಇಷ್ಟದೇವತೆಯ ಸರಸ್ವತಮ್ಮ ಅವರ ಪಾಲಿಗೆ ಒಲಿದಿದೆ.
ಜನ ಮೆಚ್ಚಿದ ಶಕುನಿಯಾಗಿ ರಂಗನಾಯಕಿಯ ಭದ್ರಾ ಆಯ್ಕೆಯಾಗಿದ್ದರೆ. ಜನ ಮೆಚ್ಚಿದ ಮಂಥರೆಯಾಗಿ ಅಗ್ನಿಸಾಕ್ಷಿಯ ಚಂದ್ರಿಕಾ ಆಯ್ಕೆಯಾಗಿದ್ದಾರೆ. ಜನ ಮೆಚ್ಚಿದ ಯೂಥ್ ಐಕಾನ್ ಸೀತಾವಲ್ಲಭದ ಮೈಥಿಲಿ, ಜನ ಮೆಚ್ಚಿದ ಸ್ಟೈಲ್ ಐಕಾನ್ ಫಿಮೇಲ್ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಶ್ರುತಿ ಮತ್ತು ಜನ ಮೆಚ್ಚಿದ ಸ್ಟೈಲ್ ಐಕಾನ್ ಮೇಲ್ ಸೀತಾ ವಲ್ಲಭ ಧಾರಾವಾಹಿಯ ಆರ್ಯ ಪಡೆದುಕೊಂಡಿದ್ದಾರೆ.
ಮಿಥುನ ರಾಶಿಯ ಅನುರಾಧಾ ಮನ ಮೆಚ್ಚಿದ ಅಮ್ಮ, ಅಗ್ನಿಸಾಕ್ಷಿಯ ವಾಸುದೇವ ಅಪ್ಪ ಪ್ರಶಸ್ತಿಯನ್ನು ಪಡೆದಿದ್ದಾರೆ. ನೆಚ್ಚಿನ ವಿದೂಷಕ ಪ್ರಶಸ್ತಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ರಂಜಿತ್ ಅವರ ಪಾಲಾಗಿದೆ. ಮನ ಮೆಚ್ಚಿದ ದಂಪತಿ ಪ್ರಶಸ್ತಿ ಎರಡು ಮುದ್ದಾದ ಜೋಡಿಗೆ ಒಲಿದಿದೆ ಎಂದರೆ ತಪ್ಪಲ್ಲ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಶ್ರುತಿ - ಚಂದು ಮತ್ತು ಸೀತಾ ವಲ್ಲಭ ಧಾರಾವಾಹಿಯ ಆರ್ಯ - ಮೈಥಿಲಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಜನ ಮೆಚ್ಚಿದ ಜೋಡಿಯು ನಮ್ಮೂರ ಯುವರಾಣಿಯ ಅನಿಕೇತ್ - ಮೀರಾಗೆ ಸಿಕ್ಕಿದೆ.
ಜನ ಮೆಚ್ಚಿದ ನಾಯಕ ರಾಧಾ ರಮಣ ಧಾರಾವಾಹಿಯ ರಮಣ್, ಜನ ಮೆಚ್ಚಿದ ನಾಯಕಿಯಾಗಿ ನಮ್ಮನೆ ಯುವರಾಣಿಯ ಮೀರಾ ಮತ್ತು ಜನ ಮೆಚ್ಚಿದ ಸಂಸಾರ ಪ್ರಶಸ್ತಿಯನ್ನು ರಾಧಾ ರಮಣ ಧಾರಾವಾಹಿ ಪಡೆದುಕೊಂಡಿದೆ. ಇದರೊಂದಿಗೆ ಅಗ್ನಿಸಾಕ್ಷಿ ಧಾರಾವಾಹಿಯು ಬೆಸ್ಟ್ ರೇಟೆಡ್ ಫಿಕ್ಷನ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಇನ್ನು ಕೊನೆಯದಾಗಿ ನಾನ್ ಫಿಕ್ಷನ್ ಸರದಿಯಲ್ಲಿ ಬೆಸ್ಟ್ ರೇಟೆಡ್ ನಾನ್ ಫಿಕ್ಷನ್ ಅವಾರ್ಡ್ ಸೂಪರ್ ಮಿನಿಟ್ ಕಾರ್ಯಕ್ರಮಕ್ಕೆ ಸಿಕ್ಕಿದೆ. ಉಳಿದಂತೆ ರಾಧಾ ರಮಣ ಧಾರಾವಾಹಿಯ ಪದ್ಮಿನಿ ಪೃಥ್ವಿರಾಜ್ ಜೈನ್ ಅವರಿಗೆ ಉತ್ತಮ ಸಂಭಾಷಣೆ ಪ್ರಶಸ್ತಿ, ಮಿಥುನ ರಾಶಿ ಧಾರಾವಾಹಿ ನಿರ್ದೇಶಕ ವಿನೋದ್ ಧೋಂಡಾಳೆಗೆ ಉತ್ತಮ ನಿರ್ದೇಶನ ಪ್ರಶಸ್ತಿ, ನಮ್ಮನೆ ಯುವರಾಣಿ ಧಾರಾವಾಹಿಯ ಮಂಜು ಮೊಗಲಹಳ್ಳಿಗೆ ಉತ್ತಮ ಸಂಕಲನ ಪ್ರಶಸ್ತಿ, ಮಂಗಳಗೌರಿ ಮದುವೆ ಧಾರಾವಾಹಿಯ ಕೆಎಸ್ ರಾಮ್ ಜಿ ಉತ್ತಮ ಕತೆ-ಚಿತ್ರಕಥೆ ಪ್ರಶಸ್ತಿ ದೊರಕಿದೆ.