ಬೆಳ್ಳಿತೆರೆಯ ನಟ ನಟಿಯರು ಕಿರುತೆರೆಯಲ್ಲಿ ನಟಿಸುವುದು ಮೊದಲೆಲ್ಲಾ ತೀರಾ ಅಪರೂಪದ ವಿಚಾರವಾಗಿತ್ತು. ಆದರೆ ಈಗ ಅದು ಮಾಮೂಲು ಎನಿಸಿದೆ. ಚಂದನವನದಲ್ಲಿ ಛಾಪು ಮೂಡಿಸಿರುವ ನಟ ನಟಿಯರು ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಅತಿಥಿ ಕಲಾವಿದರಾಗಿ ನಟಿಸುತ್ತಿದ್ದಾರೆ.
ಶ್ರುತಿ, ರಮೇಶ್ ಅರವಿಂದ್, ಅಜಯ್ ರಾಜ್, ಪ್ರಿಯಾಂಕಾ ಉಪೇಂದ್ರ ಅವರಂತ ಕಲಾವಿದರು ಕಿರುತೆರೆ ಮೂಲಕ ಕೂಡಾ ಹೆಸರಾಗಿದ್ದರು. ಇದೀಗ ಸುಧಾರಾಣಿ ಕೂಡಾ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಒಂದು ವಾರಗಳ ಕಾಲ 'ಕಸ್ತೂರಿ ನಿವಾಸ' ಹಾಗೂ 'ಸೇವಂತಿ' ಧಾರಾವಾಹಿಗಳ ಮಹಾಸಂಗಮ ನಡೆಯುತ್ತಿದ್ದು ವಿಶೇಷ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಳ್ಳಲಿದ್ದಾರೆ. ಸುಧಾರಾಣಿ ಆಗಮನದಿಂದ ಎರಡು ಧಾರಾವಾಹಿಗಳ ಕಥೆಗಳಲ್ಲಿ ತಿರುವು ದೊರೆಯಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.
ಸುಧಾರಾಣಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಲಾಯರ್ ಶಕುಂತಲಾ ಆಗಿ ಸುಧಾರಾಣಿ ಅಭಿನಯಿಸುತ್ತಿದ್ದಾರೆ. ಇದೀಗ ಈ ಧಾರಾವಾಹಿಗಳ ಮಹಾಸಂಗಮ ನೋಡಲು ಕಿರುತೆರೆಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.