ಬೆಂಗಳೂರು: ಒಂದೆಡೆ ಇಂದು ನಟ, ನಿರ್ದೇಶಕ ರಿಶಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಗಂಡು ಮಗುವಿಗೆ ಜನ್ಮ ನೀಡಿದ್ದರೆ, ಟಾಕಿಂಗ್ ಸ್ಟಾರ್ ಎಂದೇ ಹೆಸರಾದ ನಿರೂಪಕ ಸೃಜನ್ ಲೋಕೇಶ್ ಕೂಡಾ ಗಂಡುಮಗುವಿನ ತಂದೆಯಾಗಿದ್ದಾರೆ.
ಸೃಜನ್ ಲೋಕೇಶ್ ಪತ್ನಿ ಗ್ರೀಷ್ಮಾ ಇಂದು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗ್ರೀಷ್ಮಾಗೆ ಗಂಡು ಮಗು ಜನಿಸಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಗ್ರೀಷ್ಮಾ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಗ್ರೀಷ್ಮಾ ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ನಟಿ ಶ್ವೇತಾ ಚಂಗಪ್ಪ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
ಸೃಜನ್ ಮತ್ತು ಗ್ರೀಷ್ಮಾ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗಾಗಲೇ ಈ ಜೋಡಿಗೆ ಒಬ್ಬ ಮಗನಿದ್ದಾನೆ. ಸೃಜನ್ಗೆ ಚಿತ್ರರಂಗದ ಸ್ನೇಹಿತರು ಹಾಗೂ ಸಂಬಂಧಿಕರು ಶುಭ ಕೋರಿದ್ದಾರೆ.