ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ನಾಯಕಿ ಧನ್ಯಾ ಆಗಿ ಅಭಿನಯಿಸಿ ಹೆಸರಾಗಿದ್ದ ದೀಪಿಕಾ, ಕಿರುತೆರೆ ನಟ ಆಕರ್ಷ್ ಅವರನ್ನು ಪ್ರೀತಿಸಿ ಕಳೆದ ವರ್ಷ ಮದುವೆಯಾಗಿದ್ದರು. ಇದೀಗ ಈ ಕಿರುತೆರೆ ಜೋಡಿಯ ದಾಂಪತ್ಯ ಜೀವನಕ್ಕೆ ಒಂದು ವರ್ಷ ತುಂಬಿದೆ.
ಆಕರ್ಷ್ ಹಾಗೂ ಧನ್ಯಾ ನಿನ್ನೆ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಪತ್ನಿಗೆ ಆಕರ್ಷ್ ಸರ್ಪ್ರೈಸ್ ಡೇಟ್ ನೀಡಿದ್ದು ದೀಪಿಕಾ ಬಹಳ ಖುಷಿಯಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪತಿ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ, ''ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ ನಾವು ಸ್ವರ್ಗದ ಸುಖವನ್ನು ಸದ್ಯಕ್ಕೆ ಭೂಮಿ ಮೇಲೆ ಅನುಭವಿಸುತ್ತಿದ್ದೇವೆ. ಇದು ನನ್ನ ಪಾಲಿನ ಸಂಭ್ರಮದ ದಿನ. ಈ ಸಂಭ್ರಮದ ದಿನಕ್ಕೆ ಮತ್ತಷ್ಟು ಮೆರುಗು ನೀಡಿದ್ದಕ್ಕೆ ಬಹಳ ಧನ್ಯವಾದಗಳು. ನನಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಒಂದು ವರ್ಷ ಹೇಗೆ ಕಳೆದು ಹೋಯಿತು ಎಂದು ನನಗೆ ತಿಳಿಯುತ್ತಿಲ್ಲ'' ಎಂದು ದೀಪಿಕಾ ಬರೆದುಕೊಂಡಿದ್ದಾರೆ.
ಸದ್ಯಕ್ಕೆ ದೀಪಿಕಾ, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿ ಆಗಿ ನಟಿಸುತ್ತಿದ್ದಾರೆ. ಆಕರ್ಷ್ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು ತೆಲುಗಿನ ತೆಲುಗಿನ 'ಗಿರಿಜಾ ಕಲ್ಯಾಣಂ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.