ಸೆಲಬ್ರಿಟಿಗಳ ಹೆಸರನ್ನು, ಪೋಟೋಗಳನ್ನು ಬಳಸಿಕೊಂಡು ಮೋಸ ಮಾಡುವ ಕೆಲಸ ಇಂದು ನಿನ್ನೆಯದಲ್ಲ. ಇಂತ ದುಷ್ಕೃತ್ಯ ಎಂದಿನಿಂದಲೋ ನಡೆಯುತ್ತಿದೆ. ಇದೀಗ ಕಿರುತೆರೆ ನಟನೊಬ್ಬರ ನಕಲಿ ಸೋಷಿಯಲ್ ಅಕೌಂಟ್ ಸೃಷ್ಟಿಸಿ ಆ ಮೂಲಕ ಕೆಲವರು ನಟನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕ ತೇಜಸ್ವಿಯಾಗಿ ಅಭಿನಯಿಸಿದ್ದ ಆರ್.ಕೆ. ಚಂದನ್ ಅವರು ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಚಂದನ್ ಹೆಸರಿನಲ್ಲಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಫ್ಯಾನ್ ಪೇಜ್ಗಳಿವೆ. ಆ ಫ್ಯಾನ್ ಪೇಜಿನ ಮೂಲಕ ಕೆಲವರು ಚಂದನ್ ಹೆಸರಿನಲ್ಲಿ ಯುವತಿಯವರಿಗೆ ಮೋಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ವಿಚಾರವನ್ನು ಸ್ವತ: ಚಂದನ್ ಅವರೇ ಹೇಳಿಕೊಂಡಿದ್ದಾರೆ. ಆರ್.ಕೆ. ಚಂದನ್ ಹೆಸರಿನಲ್ಲಿ ಒಂದಷ್ಟು ನಕಲಿ ಫೇಸ್ಬುಕ್ ಖಾತೆಗಳು ತೆರೆಯಲ್ಪಟ್ಟಿದೆ. ಮಾತ್ರವಲ್ಲ ಆ ನಕಲಿ ಖಾತೆಯ ಮೂಲಕ ಹೆಣ್ಣು ಮಕ್ಕಳಿಗೆ ಅಸಭ್ಯ ಸಂದೇಶ ಕಳಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ನಿಜ ಹೇಳಬೇಕೆಂದರೆ ನಾನು ಫೇಸ್ಬುಕ್ ಬಳಸುತ್ತಿಲ್ಲ. ನನ್ನ ಹೆಸರಿನಲ್ಲಿ ಇರುವ ಫೇಸ್ಬುಕ್ ಖಾತೆಗಳು ನನ್ನದಲ್ಲ. ಈಗಾಗಲೇ ಈ ಫೇಸ್ಬುಕ್ ಅಕೌಂಟ್ನಿಂದ ಸಾಕಷ್ಟು ಜನರು ಮೋಸ ಹೋಗಿದ್ದಾರೆ. ಈ ಬಗ್ಗೆ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ.
ನಾನು ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಮಾತ್ರ ಬಳಸುತ್ತಿದ್ದು ನನ್ನ ಹೆಸರಿನಿಂದ ಯಾವುದಾದರೂ ಸಂದೇಶಗಳು ಬಂದರೆ ದಯವಿಟ್ಟು ಅದರನ್ನು ಪರಿಶೀಲಿಸಿ ಎಂದು ಚಂದನ್ ಮನವಿ ಮಾಡಿದ್ದಾರೆ.