ಬೆಳ್ಳಿತೆರೆ, ಕಿರುತೆರೆಯಲ್ಲಿ ಹೆಸರು ಮಾಡಿರುವ ಎಷ್ಟೊ ಪ್ರತಿಭೆಗಳು ತಾವು ಅಂದುಕೊಳ್ಳುವುದೇ ಒಂದು, ಕೊನೆಗೆ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರವೇ ಒಂದು. ಕೆಲವರಿಗೆ ಇದು ಬಯಸದೆ ಬಂದ ಭಾಗ್ಯ ಆದರೆ ಮತ್ತೆ ಕೆಲವರು ಬಣ್ಣದ ಲೋಕದ ಆಕರ್ಷಣೆಯಿಂದ ಇಲ್ಲಿಗೆ ಬರುತ್ತಾರೆ.
'ಮಿಥುನ ರಾಶಿ'ಯ ಸುರಕ್ಷಾ ಅವರದ್ದು ಕೂಡಾ ಇದೇ ಕಥೆ. ಆಕೆಗೆ ಒಲವಿದ್ದದ್ದು ಕ್ರೀಡೆಯತ್ತ. ಆದರೆ ಮಿಂಚುತ್ತಿರುವುದು ನಟನಾ ಕ್ಷೇತ್ರದಲ್ಲಿ. ಅವರ ಹೆಸರು ಪೂಜಾ. ಆದರೆ ಬಣ್ಣದ ಲೋಕದಲ್ಲಿ ಆಕೆ ಸುರಕ್ಷಾ ಎಂದೇ ಫೇಮಸ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಸುರಕ್ಷಾ ಆಗಿ ನಟಿಸುತ್ತಿರುವ ಪೂಜಾ ಮೂಲತಃ ಬಳ್ಳಾರಿಯವರು.
ಡಿಪ್ಲೋಮಾ ಜೊತೆಗೆ ಬಿ.ಇ ಪದವಿ ಪಡೆದಿರುವ ಪೂಜಾಗೆ ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯತ್ತ ವಿಶೇಷ ಒಲವು. ಅದರಲ್ಲೂ ಹಾಕಿ ಆಟ ಎಂದರೆ ಆಕೆಗೆ ಪಂಚಪ್ರಾಣ. ಹಾಕಿ ಆಟದಲ್ಲಿ ನ್ಯಾಷನಲ್ ಲೆವೆಲ್ ತಲುಪಿದ್ದ ಪೂಜಾಗೆ ಅದರಲ್ಲೇ ಸಾಧನೆ ಮಾಡಬೇಕೆಂಬುದು ಕನಸಾಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಅವರ ದೊಡ್ಡ ಅಭಿಮಾನಿಯಾಗಿರುವ ಪೂಜಾ, ಹಾಕಿ ಆಟಕ್ಕೆ ಬೈ ಬೈ ಹೇಳಿ ನಟನೆಗೆ ಹಾಯ್ ಹೇಳಿದ ಸಂಗತಿ ನಿಜಕ್ಕೂ ರೋಚಕವಾದುದು.
ಪೂಜಾಗೆ ಗಣೇಶ್ ಅವರನ್ನು ಭೇಟಿ ಮಾಡಬೇಕೆಂಬ ಮಹಾದಾಸೆ ಇತ್ತು. ಆಕೆಯ ಅದೃಷ್ಟ ಎಂಬಂತೆ ಗಣೇಶ್ ಅವರನ್ನು ಭೇಟಿ ಮಾಡುವ ಅವಕಾಶ ಕೂಡಾ ಆಕೆಗೆ ದೊರೆಯಿತು. ಮಹಾನಗರಿ ಬೆಂಗಳೂರಿನಲ್ಲಿ ಹಾಕಿ ನ್ಯಾಷನಲ್ ಕ್ಯಾಂಪ್ ನಡೆಯುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರೀಕರಣ ನಡೆಯುತ್ತಿತ್ತು. ಈ ವಿಷಯ ತಿಳಿದು ಪೂಜಾ ಅಲ್ಲಿಗೆ ಭೇಟಿ ನೀಡಿ ಗಣೇಶ್ ಅವರನ್ನು ಮಾತನಾಡಿಸಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಆಗ ಅಲ್ಲಿದ್ದ ಹಲವು ಮಂದಿ ಪೂಜಾ ಅವರ ಬಳಿ ನೀವು ನಟಿಯಾ..? ಎಂದು ಪ್ರಶ್ನಿಸಿದ್ದಾರೆ. ಆ ಪ್ರಶ್ನೆಯೇ ಪೂಜಾಗೆ ಬಣ್ಣದ ಲೋಕಕ್ಕೆ ಬರಲು ಪ್ರೇರಣೆ ಆಯ್ತು.
ಪೂಜಾ ಅವರ ನಟನಾ ಬದುಕಿಗೆ ಮುನ್ನುಡಿ ಬರೆದದ್ದು ಜಾಹೀರಾತು ಚಿತ್ರೀಕರಣ. ತಮ್ಮ ಹುಟ್ಟೂರು ಬಳ್ಳಾರಿಯಲ್ಲಿ ನಡೆದ ಆ್ಯಡ್ ಶೂಟ್ನಲ್ಲಿ ನಟಿಸುವ ಮೂಲಕ ಬಣ್ಣದ ಜಗತ್ತಿಗೆ ಬಂದ ಪೂಜಾ ಮತ್ತೆ ಹಿಂದಿರುಗಿ ನೋಡಿದ್ದಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಪೂಜಾ, ನಿತ್ಯಾ ಪಾತ್ರಕ್ಕೆ ಜೀವ ತುಂಬಿದರು. ಶಶಾಂಕ್ ನಿರ್ದೇಶನದ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ನಟಿಸಿರುವ ಈಕೆ 'ಕೃಷ್ಣ ಗಾರ್ಮೆಂಟ್ಸ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.