ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮನಸೆಲ್ಲಾ’ ಧಾರಾವಾಹಿಯಲ್ಲಿ ‘ರಾಗಾ’ ಪಾತ್ರದಿಂದ ಕಿರುತೆರೆ ನಟಿ ರಶ್ಮಿ ಪ್ರಭಾಕರ್ ಹೊರ ಬಂದಿದ್ದಾರೆ. ಇದೀಗ ಅಭಿನಯ ಕಲಿಸುವ ಗುರುವಾಗಿ ಬದಲಾಗಿದ್ದಾರೆ ರಶ್ಮಿ. ಕಳೆದ ಏಪ್ರಿಲ್ ತಿಂಗಳಿನಿಂದ ನಟನೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳಿಗಾಗಿ ಕಾರ್ಯಾಗಾರ ನಡೆಸುತ್ತಿದ್ದಾರೆ.
ಇದರ ಬಗ್ಗೆ ಮಾತನಾಡಿರುವ ರಶ್ಮಿ ಪ್ರಭಾಕರ್, "ನಟನೆಯಲ್ಲಿ ಆಸಕ್ತಿ ಇರುವ ಅನೇಕರಿಗೆ ಇಂದು ಕಲಾ ಶಾಲೆಗಳಿಗೆ ತೆರಳಿ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹಳ್ಳಿಗಳಲ್ಲಿ ಇರುವವರಿಗೆ ನಟನೆಗೆ ಸಂಬಂಧಪಟ್ಟ ಕೋರ್ಸ್ಗಳಿಗೆ ಸೇರುವುದು ತುಂಬಾ ಕಷ್ಟ. ಅದೇ ಕಾರಣದಿಂದ ಕೋವಿಡ್‌ನಿಂದ ಗುಣಮುಖವಾದ ತಕ್ಷಣ ನಾನು ಮೆಂಟರ್ ಆಗುವ ನಿರ್ಧಾರ ಮಾಡಿದೆ. ಆ ಮೂಲಕ ಲಾಕ್‌ಡೌನ್‌ನಲ್ಲಿ ನಾನು ನನ್ನ ಸಮಯವನ್ನು ಪರಿಣಾಮಕಾರಿಯಾಗಿ ಕಳೆಯುವ ಆಲೋಚನೆ ಮಾಡಿದೆ" ಎಂದು ಹೇಳಿದ್ದಾರೆ.
"ನಾನು ನಟನಾ ಕ್ಷೇತ್ರಕ್ಕೆ ಪ್ರವೇಶ ಮಾಡಿದಾಗ ಯಾರೂ ಕೂಡ ನನ್ನನ್ನು ಮುನ್ನಡೆಸಲಿಲ್ಲ. ನಾನೊಬ್ಬಳೇ ಎಲ್ಲವನ್ನು ನಿಭಾಯಿಸಬೇಕಾಗಿತ್ತು. ಹಾಗಾಗಿ ಈ ಅನುಭವಗಳಿಂದಲೇ ನಾನು ಇನ್ನೊಬ್ಬರಿಗೆ ಉಪಕಾರ ಮಾಡುವಂತೆ ಮಾಡಿತು. ಇದರ ಜೊತೆಗೆ ನಾನು ಇಲ್ಲಿ ಕಲಿತ ವಿಚಾರಗಳನ್ನು ಇನ್ನೊಬ್ಬರಿಗೆ ಹೇಳಿಕೊಡಲು ನಾನು ತುಂಬಾನೇ ಉತ್ಸುಕಳಾಗಿದ್ದೆ. ಅದೇ ಕಾರಣದಿಂದ ಎಪ್ರಿಲ್ ಕೊನೆಯ ವಾರದಿಂದ ನಟನೆ ಕಲಿಸಲು ಮುಂದಾದೆ" ಎನ್ನುತ್ತಾರೆ ರಶ್ಮಿ.