ಬೆಂಗಳೂರು: ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ಬಾಯ್ ಹಾಗೂ ‘ಕನ್ನಡತಿ’ಯ ಹುಡುಗ ಕಿರಣ್ ರಾಜ್ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ತಮ್ಮ ಜನ್ಮದಿನದಂದು ಕಿರಣ್ ರಾಜ್ ಹೊಸ ವೆಬ್ ಸೈಟ್ ಆರಂಭಿಸಿದ್ದಾರೆ. ಅಂದ ಹಾಗೆ ಕೋವಿಡ್-19 ನಂತಹ ಕಷ್ಟದ ಪರಿಸ್ಥಿತಿಯಲ್ಲಿ ಅಗತ್ಯವಿರುವವರಿಗೆ ನೆರವು ನೀಡುವ ಉದ್ದೇಶದಿಂದ ಈ ವೆಬ್ ಸೈಟ್ ಆರಂಭಿಸಲಾಗಿದೆ.
ತಮ್ಮ ಹೊಸ ವೆಬ್ ಸೈಟ್ ಬಗ್ಗೆ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿರುವ ಕಿರಣ್ ರಾಜ್, ‘ಇಂತಹ ಪರಿಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ, ಶುಭ ಹಾರೈಸಿದವರಿಗೆ ಧನ್ಯವಾದಗಳು. ಈ ಅವಧಿ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆ. ಮಾತ್ರವಲ್ಲ ಈ ವರ್ಷ ನನ್ನನ್ನು ಜಾಗೃತನಾಗಿ ಮಾಡಿದೆ. ನಾನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು ಜನರು ಕೂಡಾ ಸಹಾಯ ಬಯಸುತ್ತಿದ್ದಾರೆ. ಹೀಗಾಗಿ ನನ್ನ ಹುಟ್ಟುಹಬ್ಬದಂದು ಕಷ್ಟದಲ್ಲಿರುವವರು ನನ್ನನ್ನು ಸಂಪರ್ಕಿಸಲು ವೆಬ್ ಸೈಟ್ ಆರಂಭಿಸಿದ್ದೇನೆ ಎಂದಿದ್ದಾರೆ.
ಅಲ್ಲದೆ www.kiranraj.me ವೆಬ್ ಸೈಟ್ ಸಹಾಯ, ಅಗತ್ಯವಿರುವವರಿಗಾಗಿ ತೆರೆಯಲಾಗಿದೆ. ದಯವಿಟ್ಟು ನಿಮ್ಮ ಕಷ್ಟ ಹಂಚಿಕೊಳ್ಳಿ. ಜೊತೆಗೆ ಅಗತ್ಯ ಸಹಾಯ ಬೇಕಿರುವವರಿಗೆ ಕೆಲಸ ಮಾಡೋಣ ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮೈಸೂರು ಹುಣಸೂರು ರಸ್ತೆಯಲ್ಲಿ ಹಲಸಿನಹಣ್ಣು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಜೊತೆ ಸಂವಾದ ಮಾಡಿರುವ ವಿಡಿಯೋ ಶೇರ್ ಮಾಡಿರುವ ಕಿರಣ್ ರಾಜ್ , ‘ನಮ್ಮ ಜನರು, ನಮ್ಮ ಆರ್ಥಿಕತೆಯನ್ನು ರಕ್ಷಿಸಲು ಸಾಧ್ಯವಾದಾಗ ರಕ್ಷಿಸಬೇಕು. ಇಂತಹ ಕಠಿಣ ಸ್ಥಿತಿಯಲ್ಲಿ ಸಣ್ಣ ಉದ್ದಿಮೆದಾರರು, ದಿನಗೂಲಿಯವರು ಕಷ್ಟದಲ್ಲಿದ್ದಾರೆ. ಪ್ರತಿಯೊಬ್ಬರು ಅವರಿಂದ ಖರೀದಿಸಲು ನಾನು ಪ್ರೋತ್ಸಾಹಿಸುತ್ತೇನೆ. ಅಂದ ಹಾಗೆ ನಾನು ವಿಡಿಯೋ ಉದ್ದೇಶದಿಂದ ಮಾಸ್ಕ್ ಧರಿಸಿಲ್ಲ, ಎಲ್ಲರೂ ಮಾಸ್ಕ್ ಧರಿಸಿ, ಸುರಕ್ಷಿತವಾಗಿರಿ’ ಎಂದು ಹೇಳಿಕೊಂಡಿದ್ದರು.