ಈಗಾಗಲೇ ಗಿಣಿರಾಮ, ನಾಗಿಣಿ, ಮಂಗಳ ಗೌರಿ ಮದುವೆ, ಗಟ್ಟಿಮೇಳ, ಜೊತೆ ಜೊತೆಯಲಿ ಸೇರಿದಂತೆ ಅನೇಕ ಧಾರಾವಾಹಿಗಳ ಚಿತ್ರೀಕರಣ ಪ್ರಸ್ತುತ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಇದೀಗ ಸರಸು ಧಾರಾವಾಹಿ ತಂಡ ಚಿತ್ರೀಕರಣಕ್ಕಾಗಿ ಹೈದರಾಬಾದ್ಗೆ ತೆರಳಿದೆ.
ಸರಸು ಧಾರಾವಾಹಿ ತಂಡದ ಕಲಾವಿದರು ಮತ್ತು ಸಿಬ್ಬಂದಿ ಸದಸ್ಯರು ಕಳೆದ ವಾರದಿಂದ ಹೈದರಾಬಾದ್ನ ಸ್ಟುಡಿಯೋವೊಂದರಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದು, ಹೊಸ ಸಂಚಿಕೆಗಳೊಂದಿಗೆ ಧಾರಾವಾಹಿ ಪ್ರಸಾರ ಮಾಡುವ ಸಾಧ್ಯತೆಯಿದೆ.
ಧಾರಾವಾಹಿಯ ನಾಯಕಿ ಸುಪ್ರಿತಾ ಸತ್ಯನಾರಾಯಣ್ ಇದೀಗ ಕೋವಿಡ್ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಧಾರಾವಾಹಿ ಸೆಟ್ಗೆ ಸೇರಿದ್ದಾರೆ. ಸುಪ್ರಿತಾ ಹೇಳುವ ಪ್ರಕಾರ, “ಒಂದು ತಿಂಗಳ ವಿರಾಮದ ನಂತರ ಸೆಟ್ಗೆ ಮರಳಲು ನನಗೆ ಸಂತೋಷವಾಗಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ತಂಡವು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನನಗೆ ಸಂತೋಷವಾಗಿದೆ. ಮುಂದಿನ ವಾರದಿಂದ ನಾವು ಹೊಸ ಸಂಚಿಕೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದೇವೆ ಎಂದು ತಿಳಿಸಿದ್ದಾರೆ.
ಧಾರಾವಾಹಿಯಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸುವ ಮೂಲಕ ಜೀವನದಲ್ಲಿ ಏನಾದರೂ ಸಾಧಿಸುವ ಕನಸು ಕಾಣುವ ಸರಸು ಎಂಬ ಕಾಲೇಜು ವಿದ್ಯಾರ್ಥಿನಿಯ ಪಾತ್ರದಲ್ಲಿ ಸುಪ್ರಿತಾ ನಟಿಸುತ್ತಿದ್ದಾರೆ. ಇನ್ನು ಧಾರಾವಾಹಿಯಲ್ಲಿ ಸ್ಕಂದ ಅಶೋಕ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.