ಜೈಮಾತಾ ಕಂಬೈನ್ಸ್ ಬ್ಯಾನರ್ ಅಡಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಕನ್ನಡತಿ' ಧಾರಾವಾಹಿ ಇದೇ 27 ರಿಂದ ಪ್ರಸಾರ ಆರಂಭಿಸುತ್ತಿದೆ. ಈಗಾಗಲೇ ಧಾರಾವಾಹಿಯ ಎರಡು ಪ್ರೋಮೋಗಳು ಬಿಡುಗಡೆಯಾಗಿದ್ದು ಧಾರಾವಾಹಿ ಪ್ರಿಯರು ಹೊಸ ಧಾರಾವಾಹಿಯನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಧಾರಾವಾಹಿಯಲ್ಲಿ ರಂಜನಿ ರಾಘವನ್ ಹಾಗೂ ಕಿರಣ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಧಾರಾವಾಹಿಗೆ ಮತ್ತೊಬ್ಬ ಚೆಲುವೆಯ ಎಂಟ್ರಿ ಆಗಿದೆ. ಆಕೆ ಹೆಸರು ಸಾರಾ ಅಣ್ಣಯ್ಯ. ಧಾರಾವಾಹಿ ಪ್ರೋಮೋದಲ್ಲಿ ವರುಧಿನಿ ಎಂಬ ಹೆಸರಿನಲ್ಲಿ ಕಾಣಿಸಿಕೊಂಡ ಚೆಲುವೆ ಹೆಸರು ಸಾರಾ ಅಣ್ಣಯ್ಯ. 'ನಮ್ಮೂರ ಹೈಕ್ಳು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಸಾರಾ ಇದೀಗ ಮೊದಲ ಬಾರಿಗೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಈಗಾಗಲೇ ತಮಿಳು ಕಿರುತೆರೆಯಲ್ಲಿ ಅಭಿನಯಿಸಿರುವ ಸಾರಾ 'ನನಗೆ ಕನ್ನಡ ಧಾರಾವಾಹಿಯ ಮೂಲಕವೇ ಕಿರುತೆರೆ ಪಯಣ ಆರಂಭಿಸಬೇಕು ಎಂಬ ಆಸೆ ಇತ್ತು. ಆದರೆ ತಮಿಳು ಧಾರಾವಾಹಿಯಲ್ಲಿ ನಟಿಸಲು ಮೊದಲು ಅವಕಾಶ ಲಭಿಸಿತು. ಆದರೂ ಪರವಾಗಿಲ್ಲ ಈ ಧಾರಾವಾಹಿಯಲ್ಲಿ ಒಳ್ಳಯ ಪಾತ್ರವೇ ದೊರೆತಿದೆ' ಎನ್ನುತ್ತಾರೆ ಸಾರಾ.
ಕನ್ನಡತಿಯಲ್ಲಿ ನಾನು ವರುಧಿನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಈ ಧಾರಾವಾಹಿಯಲ್ಲಿ ನಾನು ವೆಡ್ಡಿಂಗ್ ಪ್ಲ್ಯಾನರ್ ಆಗಿ ನಟಿಸುತ್ತಿದ್ದೇನೆ. ದೊಡ್ಡ ಮನೆತನದಿಂದ ಬಂದಿರುವ ವರುಧಿನಿ ಸ್ಟ್ರೈಟ್ ಫಾರ್ವರ್ಡ್ ಹುಡುಗಿ . ತನಗೆ ಬೇಕಾದ್ದನ್ನು ಪಡೆದೇ ತೀರುವ ಹಠ ಇರುವ ವರುಧಿನಿಗೆ ಇದು ನೆಗೆಟಿವ್ ಶೇಡ್ ಪಾತ್ರ. ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ ಸಾರಾ. ಕಿರುತೆರೆಯಲ್ಲಿ ಸಾರಾ ಹೇಗೆ ವೀಕ್ಷಕರ ಗಮನ ಸೆಳೆಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.