ಸ್ಯಾಂಡಲ್ವುಡ್ನ ಕುಳ್ಳ ಎಂದೇ ಖ್ಯಾತಿ ಗಳಿಸಿರುವ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.
ಹೌದು, ಸಿನಿಮಾ ಸೋಲಿನಿಂದಾಗಿ ಸಾಲದ ಸುಳಿಯಿಂದ ಹೊರಗಡೆ ಬರಲು ದ್ವಾರಕೀಶ್ ತಮ್ಮ ಪ್ರೀತಿಯ ಮನೆಯನ್ನು ಮಾರಿದ್ದಾರೆ ಎನ್ನಲಾಗ್ತಿದೆ. ಕಳೆದ 52 ವರ್ಷಗಳಲ್ಲಿ 52 ಸಿನಿಮಾಗಳನ್ನು ನಿರ್ಮಿಸಿರುವ ದ್ವಾರಕೀಶ್, ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿ, ಅದ್ಭುತವಾಗಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದ ದ್ವಾರಕೀಶ್, ತಮ್ಮ 78 ನೇ ವಯಸ್ಸಿನಲ್ಲಿ ಕಟ್ಟಿದ ಮನೆಯನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಸುದೀರ್ಘ ವರ್ಷಗಳ ಕಾಲ ಚಿತ್ರರಂಗಕ್ಕಾಗಿ ದುಡಿದು, ಕಲಾಸೇವೆ ಮಾಡಿರುವ ದ್ವಾರಕೀಶ್ ಆರಾಮಾಗಿ, ಸುಖಕರವಾಗಿ ಜೀವನ ಕಳೆಯಬೇಕಿರುವ ಈ ಇಳಿವಯಸ್ಸಿನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಹಲವು ಬಾರಿ ದ್ವಾರಕೀಶ್ ಮನೆ, ಆಸ್ತಿ ಮಾರಿ ಸಿನಿಮಾ ಮಾಡಿದ್ದಾರೆ. ದ್ವಾರಕೀಶ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವುದು ಇದೇ ಮೊದಲೇನಲ್ಲ. ಪ್ರತಿಬಾರಿ ಸಂಕಷ್ಟಕ್ಕೆ ಸಿಲುಕಿದಾಗೆಲ್ಲಾ ಅವರನ್ನು ಕೈ ಹಿಡಿದುದ್ದು, ಆಪ್ತಮಿತ್ರ ವಿಷ್ಣುವರ್ಧನ್.
ಸಾಲವನ್ನು ತೀರಿಸದೆ ಒದ್ದಾಡುತ್ತಿರುವ ದ್ವಾರಕೀಶ್ ಮತ್ತು ಪುತ್ರ ಯೋಗಿ ಅನ್ಯ ದಾರಿ ಕಾಣದೆ ಕೊನೆಯದಾಗಿ ಹೆಚ್ಎಸ್ಆರ್ ಲೇಔಟ್ನಲ್ಲಿರುವ ತಮ್ಮ ಪ್ರೀತಿಯ ಮನೆಯನ್ನು 10.5 ಕೋಟಿ ರೂ.ಗೆ ಮಾರಿದ್ದಾರೆ. ಹಿರಿಯ ನಟನ ಮನೆಯನ್ನು ಸ್ಯಾಂಡಲ್ವುಡ್ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಖರೀದಿಸಿದ್ದಾರೆ ಎಂದು ಹೇಳಲಾಗ್ತಿದೆ.
ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ನಟ ಮತ್ತು ನಿರ್ದೇಶಕ ರಿಷಬ್ ಹತ್ತೂವರೆ ಕೋಟಿ ಕೊಟ್ಟು ಮನೆಯನ್ನು ತನ್ನದಾಗಿಸಿಕೊಂಡಿದ್ದಾರಂತೆ. ಆದರೆ ದ್ವಾರಕೀಶ್ ಆಗಲಿ, ನಟ ರಿಷಬ್ ಶೆಟ್ಟಿ ಆಗಲಿ ಈ ವಿಷಯವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ.