ಕೊರೊನಾ ಸಮಸ್ಯೆ ಆರಂಭವಾಗಿ ಕಿರುತೆರೆ ಧಾರಾವಾಹಿಗಳ ಪ್ರಸಾರ ನಿಂತ ನಂತರ ವಾಹಿನಿಗಳು ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡಲು ಆರಂಭಿಸಿದ್ದವು. ಒಂದಾದ ಮೇಲೊಂದರಂತೆ ಹಿಂದಿ, ತೆಲುಗು ಭಾಷೆಯ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದ್ದವು.
ಆದರೆ ಈಗ ಡಬ್ಬಿಂಗ್ ವಿರೋಧಿಗಳಿಗೆ ಸಮಾಧಾನ ತರುವ ವಿಚಾರ ಒಂದಿದೆ. ಇದೇ ಮೊದಲ ಬಾರಿಗೆ ಡಬ್ಬಿಂಗ್ ಧಾರಾವಾಹಿಯೊಂದು ಅರ್ಧಕ್ಕೆ ಪ್ರಸಾರ ನಿಂತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಓಂ ನಮಃ ಶಿವಾಯ ಪೌರಾಣಿಕ ಧಾರಾವಾಹಿಗೆ ವೀಕ್ಷಕರ ಕೊರತೆ ಇಲ್ಲದಿರುವುದು ಈ ಧಾರಾವಾಹಿ ಅರ್ಧಕ್ಕೆ ನಿಲ್ಲಲು ಕಾರಣವಾಗಿದೆ.
ಹಿಂದಿಯ ಲೈಫ್ ಓಕೆ ಚಾನೆಲ್ನಲ್ಲಿ ಪ್ರಸಾರವಾಗಿದ್ದ 'ದೇವೋಂಕ ದೇವ್ ಮಹಾದೇವ್' ಓಂ ನಮಃ ಶಿವಾಯ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿತ್ತು. ಶಿವನ ಹಲವು ಅವತಾರಗಳನ್ನು ವೀಕ್ಷಕರ ಮುಂದೆ ತೆರೆದಿಡಲಿದ್ದ ಈ ಧಾರಾವಾಹಿ ಜುಲೈ 13 ರಿಂದ ಪ್ರಸಾರ ಆರಂಭಿಸಿತ್ತು. ಮೋಹಿತ್ ರೈನಾ ಮಹಾದೇವನಾಗಿ ನಟಿಸಿದ್ದರೆ, ಪಾರ್ವತಿಯಾಗಿ ಸೋನಾರಿಕಾ ಭಸೋರಿಯಾ ಅಭಿನಯಿಸಿದ್ದಾರೆ. ಧಾರಾವಾಹಿಯಲ್ಲಿ ಕೆಜಿಎಫ್ ಹುಡುಗಿ ಮೌನಿ ರಾಯ್ ಕೂಡಾ ನಟಿಸಿದ್ದಾರೆ.
ಒಟ್ಟಿನಲ್ಲಿ ಈ ಧಾರಾವಾಹಿ ಅರ್ಧಕ್ಕೆ ನಿಂತಿರುವುದು ಕೆಲವರಿಗೆ ಬೇಸರದ ವಿಚಾರವಾದರೆ ಡಬ್ಬಿಂಗ್ ವಿರೋಧಿಗಳಿಗೆ ಖುಷಿ ನೀಡಿದೆ.