ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ನಂದಿನಿ' ಧಾರಾವಾಹಿ 850 ಕಂತುಗಳನ್ನು ಪೂರೈಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೊಸ ಕಥೆಯೊಂದಿಗೆ ಪ್ರೇಕ್ಷಕರನ್ನುರಂಜಿಸಲು ಧಾರಾವಾಹಿ ತಂಡ ಸಿದ್ಧವಾಗಿದೆ. 'ನಂದಿನಿ' ಧಾರಾವಾಹಿ ಅದ್ಭುತ ದೃಶ್ಯಗಳು, ಭವ್ಯ ತಾರಾಗಣ ಮತ್ತು ರೋಚಕ ತಿರುವುಗಳೊಂದಿಗೆ ಹೊರಹೊಮ್ಮುತ್ತಲೇ ಇದೆ. ಇದೀಗ 'ನಂದಿನಿ' ಕಥೆಯು ಒಂದು ಕುತೂಹಲಕಾರಿ ಘಟ್ಟ ತಲುಪಿದೆ.
![Nandini serial](https://etvbharatimages.akamaized.net/etvbharat/prod-images/kn-bng-03-nandini-nagaloka-vis-ka10018_04022020133419_0402f_1580803459_82.jpg)
ಜನನಿ ಶಾಶ್ವತವಾಗಿ ಕಲ್ಲಾಗಿ ಕಾಡುಮಲೆ ದೇವಸ್ಥಾನದಲ್ಲಿ ಅನುಷ್ಠಾನವಾಗುವ ವೇಳೆ, ಕಾಲಚಕ್ರವನ್ನು ರಕ್ಷಿಸುವಲ್ಲಿ ಸೋಲುತ್ತಾಳೆ. ಒಂದು ಕಾಲಚಕ್ರ ದುಷ್ಟೆ ಶರಬ ಪಡೆದರೆ, ಇನ್ನೊಂದನ್ನು ಮಾಟಗಾರ ನಂಬೂದರಿ ಪಡೆಯುತ್ತಾನೆ. ತನ್ನ ಕೊನೆಯ ಕರ್ತವ್ಯವನ್ನು ಪೂರೈಸಲಾರದೆ ಜನನಿ ಆತ್ಮ ನಂದಿನಿ ಎಂಬ ಹುಡುಗಾಟದ ಹುಡುಗಿಯ ದೇಹ ಸೇರಿ ಕಾಲಚಕ್ರ ಹಿಂಪಡೆಯಲು ಹೋರಾಡುತ್ತಾಳೆ. ಈ ವಿಷಯ ತಿಳಿದ ಶರಬ, ನಂದಿನಿಯನ್ನು ಸಾಯಿಸಿಬಿಟ್ಟರೆ ಜನನಿ ಆತ್ಮಕ್ಕೆ ದೇಹ ಸಿಗದೆ ಕಾಲಚಕ್ರ ಪಡೆಯುವಲ್ಲಿ ವಿಫಲಳಾಗುತ್ತಾಳೆಂದು ಯೋಚಿಸಿ ಆ ಕಾರ್ಯಕ್ಕೆ ಮುಂದಾಗುತ್ತಾಳೆ.ಈ ಘೋರ ಕೃತ್ಯವನ್ನು ನೋಡಿ ಭೂಲೋಕದ ಅಡಿಯಿರುವ ನಾಗಲೋಕವೇ ಹೆದರಿ ನಡುಗುತ್ತದೆ. ನಾಗಲೋಕದಲ್ಲಿ ಎರಡು ತಂಡಗಳಿದ್ದು, ವಾಸುಕಿ ನಾಗಗಳು ನ್ಯಾಯಯುತವಾಗಿದ್ದರೆ, ತಕ್ಷಕ ನಾಗಗಳು ಸ್ವಾರ್ಥಿಯಾಗಿರುತ್ತದೆ. ನಾಗಲೋಕದ ಸಿಂಹಾಸನವನ್ನು ತಾವೇ ಆಳಬೇಕೆಂಬ ದುರಾಸೆಯಲ್ಲಿ ತಕ್ಷಕ ನಾಗಗಳು ಸೆಣಸಾಡುತ್ತಿರುತ್ತವೆ.
![Nandini serial](https://etvbharatimages.akamaized.net/etvbharat/prod-images/kn-bng-03-nandini-nagaloka-vis-ka10018_04022020133419_0402f_1580803459_588.jpg)
ಈ ನಾಗಲೋಕಕ್ಕೂ ನಂದಿನಿಗೂ ಸಂಬಧವೇನು? ಶರಬ ನಾಗಲೋಕದ ಅಧಿಪತಿಯಾಗಲು ಸನ್ನದ್ಧಳಾಗುತ್ತಾಳೆಯೇ? ನಾಗಲೋಕಕ್ಕೂ ಭೂಲೋಕಕ್ಕೂ ಇರುವ ನಂಟೇನು ಎಂಬ ಎಲ್ಲಾ ಕುತೂಹಲಗಳನ್ನೂ ಮುಂದಿನ ಸಂಚಿಕೆ ತೆರೆದಿಡಲಿದೆ. ಜಯ-ಪರಾಜಯದ ನಡುವೆ ಪ್ರತಿ ಸಂಚಿಕೆಯೂ ರೋಚಕವಾಗಿ ಸಾಗಲಿದೆ. ಅದ್ಭುತವಾದ ಗ್ರಾಫಿಕ್ಸ್ ಮೂಲಕ ನಾಗಲೋಕದ ಹೊರ ಪ್ರಪಂಚ, ಒಳದಾರಿ, ವಾಸುಕಿ ನಾಗಗಳ ಪ್ರಪಂಚ, ತಕ್ಷಕ ನಾಗಗಳ ವಾಸಸ್ಥಾನ, ಅವರ ನಡುವಿನ ಬೇರ್ಪಡುವ ಸೇತುವೆ ಹೀಗೆ ಹಲವಾರು ವೈಭವಗಳನ್ನು ಸೃಷ್ಟಿಸಲಾಗಿದೆ. ಗ್ರಾಫಿಕ್ಸ್ ಮಾತ್ರವಲ್ಲದೆ, ಮಾಗಡಿ ರಸ್ತೆಯ ಜೆ.ಎಮ್. ಸ್ಟುಡಿಯೋನಲ್ಲಿ ವಿಶೇಷ ಸೆಟ್ ನಿರ್ಮಿಸಿ ಧಾರಾವಾಹಿಯನ್ನು ಚಿತ್ರೀಕರಿಸಲಾಗುತ್ತಿದೆ.
![Nandini serial](https://etvbharatimages.akamaized.net/etvbharat/prod-images/kn-bng-03-nandini-nagaloka-vis-ka10018_04022020133419_0402f_1580803459_249.jpg)
'ನಂದಿನಿ' ಧಾರಾವಾಹಿ ಪ್ರಸ್ತುತ ಕನ್ನಡ ಕಿರುತೆರೆಯಲ್ಲೇ ವಿಶೇಷ ಸ್ಥಾನ ಪಡೆದಿದೆ. ಮಲ್ಲ, ಕಬೀರ, ಅಹಂ ಪ್ರೇಮಾಸ್ಮಿ, ಮಫ್ತಿಯಂತಹ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿರುವ ರಾಘವೇಂದ್ರರಾವ್, ಸೆಟ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ನಾಗಲೋಕದ ಕಲ್ಪನೆಯನ್ನು ಮೊದಲು ಕಂಡದ್ದು ನಂದಿನಿಯ ನಿರ್ಮಾಪಕರಾದ ರಮೇಶ್ ಅರವಿಂದ್. ಸದಾಕ್ರಿಯಾಶೀಲತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಏನಾದರೊಂದು ಹೊಸ ಕಲ್ಪನೆಯನ್ನು 'ನಂದಿನಿ'ಯಲ್ಲಿ ಸೃಷ್ಟಿಸುವುದರಲ್ಲಿ ರಮೇಶ್ ನಿಸ್ಸೀಮರು.
![Nandini serial](https://etvbharatimages.akamaized.net/etvbharat/prod-images/kn-bng-03-nandini-nagaloka-vis-ka10018_04022020133419_0402f_1580803459_1067.jpg)
ಗ್ರಾಫಿಕ್ಸ್ ಹಾಗೂ ಸೆಟ್ ನಿರ್ಮಾಣಕ್ಕಾಗಿ 'ನಂದಿನಿ' ತಂಡ ಒಂದು ತಿಂಗಳಿಂದ ಹಗಲು ರಾತ್ರಿ ತೊಡಗಿಸಿಕೊಂಡಿದ್ದು ತೆರೆ ಮೇಲೆ ಬರಲು ಸಜ್ಜಾಗಿದೆ. ನಾಗಲೋಕದಲ್ಲಿ ಹಿರಿಯ ನಟ ಶಿವರಾಮ್, ಕಾವ್ಯ ಶಾಸ್ತ್ರಿ, ರೇಖಾ ವಿ. ಕುಮಾರ್ ಸೇರಿದಂತೆ ಹಲವರ ತಂಡವೇ ಇದೆ. ನೂತನ ನಾಗಲೋಕದೊಂದಿಗೆ ವಿಶೇಷ ಸಂಚಿಕೆಗಳು ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30 ಕ್ಕೆ ಪ್ರಸಾರವಾಗಲಿದೆ.