ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಕಿರುತೆರೆ ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾಗಳು ಅನುಭವಿಸುವ ನಷ್ಟವನ್ನು ಧಾರಾವಾಹಿಗಳು ಎದುರಿಸುವುದಿಲ್ಲ. ಅಲ್ಲದೆ ಹಿರಿತೆರೆಗಿಂತ ನಾವೇನೂ ಕಡಿಮೆ ಇಲ್ಲ ಎಂಬುದನ್ನು ಕಿರುತೆರೆ ತಂಡ ಸಾಬೀತು ಮಾಡುತ್ತಿದೆ.
ಜೀ ಕನ್ನಡದಲ್ಲಿ ಆರಂಭವಾಗಿರುವ 'ನಾಗಿಣಿ-2' ತಂಡ ಮಾಲ್ ಒಂದರಲ್ಲಿ ಪ್ರೀಮಿಯರ್ ಶೋ ಏರ್ಪಡಿಸಿದೆ. ಈ ಧಾರಾವಾಹಿ ನೈಜ ಅನಿಸುವಂತ ಗ್ರಾಫಿಕ್ಸ್, ಅದ್ಧೂರಿ ಸೆಟ್, ಹೊಸತನದ ಮೇಕಿಂಗ್ನಿಂದ ಕಿರುತೆರೆಯಲ್ಲಿ ಶೋಭಿಸುತ್ತಿದೆ ಎಂದರೆ ತಪ್ಪಿಲ್ಲ. ಕಿರುತೆರೆ ಧಾರಾವಾಹಿಗೆ ಪ್ರಿಮಿಯರ್ ಶೋ ಏರ್ಪಡಿಸಿದ್ದು ಇದೇ ಮೊದಲು. ಶಿವಮೊಗ್ಗ, ಮೈಸೂರು, ಗದಗ, ಹಾಸನದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ವಿಶೇಷ ಪ್ರದರ್ಶನ ಏರ್ಪಾಡು ಮಾಡಲು ಜೀ ಕನ್ನಡ ವಾಹಿನಿಯ ಸ್ಪಂದನಾ ಮಹಿಳಾ ಕ್ಲಬ್ ಕೂಡಾ ಕೈ ಜೋಡಿಸಿದೆ.
ಈ ಪ್ರೀಮಿಯರ್ ಶೋಗೆ ಆಗಮಿಸಿದ ಪ್ರತಿಯೊಬ್ಬರಿಗೂ ನಾಗಿಣಿ ಬ್ರ್ಯಾಂಡ್ ಫೋಟೋ ಕೂಡಾ ವ್ಯವಸ್ಥೆ ಮಾಡಲಾಗಿತ್ತು. ಇದರ ಜೊತೆಗೆ ಪ್ರೇಕ್ಷಕರಿಗೆ ವಿಶೇಷ ಸ್ನ್ಯಾಕ್ಸ್ ಬಾಕ್ಸ್ ಕೂಡಾ ನೀಡಲಾಯ್ತು. ಶ್ರೀಮಂತವಾಗಿ ಚಿತ್ರೀಕರಿಸಿರುವ ದೃಶ್ಯಾವಳಿಗಳನ್ನು ನೋಡಿ ಪ್ರೇಕ್ಷಕರು ಸಂಭ್ರಮಿಸಿದರು. ಹಲವಾರು ವಿಶೇಷ ಸೆಟ್ ಜೊತೆಗೆ ಪವಿತ್ರ ಹುಣ್ಣಿಮೆ ದಿನದಂದು ನಾಗಮಣಿಯನ್ನು ಹೊರಗಿಟ್ಟು ಹಾವುಗಳ ಚಲನವಲನ, ನಾಗಮಣಿ ಕಳೆದು ಹೋಗುವ ಸಂದರ್ಭವನ್ನು ವಿಶೇಷವಾಗಿ ಸೆರೆ ಹಿಡಿದು ಗ್ರಾಫಿಕ್ಸ್ ಮೆರುಗು ನೀಡಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಫೆಬ್ರವರಿ 17 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9 ಕ್ಕೆ ನಾಗಿಣಿ 2 ಪ್ರಸಾರವಾಗುತ್ತಿದೆ.