ನವರಸ ನಾಯಕ ಜಗ್ಗೇಶ್ ಸಾಮಾಜಿಕ ಕಾರ್ಯಗಳಲ್ಲೂ ಮುಂದಿದ್ದು ಇತ್ತೀಚೆಗೆ ರತ್ನಮ್ಮ, ಮಂಜಮ್ಮ ಎಂಬ ವಿಶೇಷ ಚೇತನ ಸಹೋದರಿಯರಿಗೆ ಮನೆ ಕಟ್ಟಿಕೊಟ್ಟು ಅದನ್ನು ಅವರಿಗೆ ಹಸ್ತಾಂತರಿಸಿದ್ದರು. ಇದೀಗ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕೂಡಾ ರತ್ನಮ್ಮ, ಮಂಜಮ್ಮ ಅವರಿಗೆ ನೆರವಾಗಲು ಹೊರಟಿದ್ದಾರೆ.
ಈ ವಿಶೇಷ ಚೇತನ ಸಹೋದರಿಯರಿಗೆ ನೆರವಾಗುವ ಉದ್ದೇಶದಿಂದ ಹಂಸಲೇಖ ರತ್ನಮಂಜರಿ ಎಂಬ ಮೊಬೈಲ್ ಆರ್ಕೆಸ್ಟ್ರಾ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಅನೇಕರಿಗೆ ಸಹಾಯಹಸ್ತ ಚಾಚಿರುವ ಹಂಸಲೇಖ ಇದೀಗ ರತ್ನಮ್ಮ ಹಾಗೂ ಮಂಜಮ್ಮ ಇಬ್ಬರಿಗೂ ಸಹಾಯ ಮಾಡಲು ಮೊಬೈಲ್ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದಕ್ಕಾಗಿ ಜೀ಼ ಕನ್ನಡ ಆಟೊಮೊಬೈಲ್ ಪ್ರಾಯೋಜಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು ಅವರಿಗೆ ತೆರೆದ ಜೀಪ್ ಕೊಡಿಸುವ ಪ್ರಯತ್ನದಲ್ಲಿದೆ. ಇದರಿಂದ ಅವರು ಕರ್ನಾಟಕದಾದ್ಯಂತ ತಮ್ಮ ಕಾರ್ಯಕ್ರಮ ನೀಡಬಹುದಾಗಿದೆ.
ಈ ಕುರಿತು ಮಹಾಗುರುಗಳಾದ ಹಂಸಲೇಖ ಮಾತನಾಡಿ, "ರತ್ನಮ್ಮ ಹಾಗೂ ಮಂಜಮ್ಮ ಕನ್ನಡದ ಸೂಪರ್ ಗಾಯಕಿಯರು. ಅವರು ಹಿಂದೆ ದೇವಸ್ಥಾನದಲ್ಲಿ ಹಾಡಿ ತಮ್ಮ ಜೀವನೋಪಾಯ ಕಂಡುಕೊಂಡಿದ್ದರು. ಆದರೆ ಅವರಿಗೆ ಈಗ ಜೀ಼ ಕನ್ನಡ ಸರಿಗಮಪದಂತ ಬೃಹತ್ ವೇದಿಕೆ ದೊರೆತಿದೆ. ಇಬ್ಬರಿಗೂ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಇದರಿಂದ ಅವರ ಜೀವನಶೈಲಿ ಖಂಡಿತ ಬದಲಾಗಲಿದೆ. ಅವರಿಗೆ ನೆರವಾಗುವ ದೃಷ್ಟಿಯಿಂದ ನಾನು ಮೊಬೈಲ್ ಆರ್ಕೆಸ್ಟ್ರಾ ಆಯೋಜಿಸಲು ಪ್ಲ್ಯಾನ್ ಮಾಡಿದ್ದೇವೆ. ಈ ಮೊಬೈಲ್ ಆರ್ಕೆಸ್ಟ್ರಾವನ್ನು ಪ್ರತಿ ಕನ್ನಡಿಗರೂ ತಮ್ಮ ಊರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸ್ವಾಗತಿಸುತ್ತಾರೆ" ಎಂಬ ನಿರೀಕ್ಷೆ ನನ್ನದು ಎಂದು ಹಂಸಲೇಖ ವಿಶ್ವಾಸ ವ್ಯಕ್ತಪಡಿಸಿದ್ದಾರೆ.