ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ನಾಣ್ಣುಡಿ ಮೈಸೂರಿನ ಶ್ರೇಷ್ಠ.ಎಸ್.ಜುಪ್ತಿಮಠ ಸರಿಯಾಗಿ ಹೊಂದುತ್ತೆ. 14ರ ವಯಸ್ಸಿನ ಈ ಪುಟ್ಟ ಪೋರ ಬಣ್ಣದ ಲೋಕದಲ್ಲಿ ಮಿಂಚು ಹರಿಸುತ್ತಿದ್ದಾನೆ.
ಹೌದು, ಅರಮನೆ ನಗರಿ ಮೈಸೂರಿನ ಎಸ್ಜೆಸಿಇ ಕ್ಯಾಂಪಸ್ನಲ್ಲಿರುವ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಈ ಪ್ರತಿಭೆ, ಕಿರುತೆರೆ, ಹಿರಿತೆರೆ ಹಾಗೂ ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡುತ್ತಿದ್ದಾನೆ.
ಈ ಬಾಲ ಕಲಾವಿದ ನಟಿರುವ 'ಉಘೇ ಉಘೇ ಮಾದೇಶ್ವರ' ಧಾರವಾಹಿ 'ಝೀ' ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ಪ್ರಸಾರಗೊಳ್ಳುತ್ತಿದೆ. ಈ ಸೀರಿಯಲ್ನಲ್ಲಿ ಶ್ರೇಷ್ಠ ಸಿದ್ದೇಶನ ಪಾತ್ರ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾನೆ.
ಮೊದಲೇ ಹೇಳಿದಂತೆ ಈತನ ನಟನೆ ಕೇವಲ ಕಿರುತೆರೆಗೆ ಮಾತ್ರ ಸೀಮಿತಗೊಂಡಿಲ್ಲ. ಕನ್ನಡದ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾನೆ. ಇವುಗಳ ಪೈಕಿ ಆನೆಬಲ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. 'ಮೇರಾ ಭಾರತ ಮಹಾನ್' ಸೇರಿದಂತೆ ಎರಡು ಕಿರುಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಮೈಸೂರಿನ ರಂಗಶಾಲೆಯಲ್ಲಿ ಖ್ಯಾತ ರಂಗಕರ್ಮಿ ಮಂಡ್ಯ ರಮೇಶ್ ಅವರಲ್ಲಿ ರಂಗ ತರಬೇತಿ ಪಡೆಯುತ್ತಿರುವ ಶ್ರೇಷ್ಠ, 15ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾನೆ.
ಶಿವಮೂರ್ತಿ ಹಾಗೂ ಕಲ್ಪನಾ ಜುಪ್ತಿಮಠ ದಂಪತಿಯ ಪುತ್ರ ಶ್ರೇಷ್ಠ, ಎಳೆವಯಸ್ಸಿನ ಹುಡುಗ ಕೇವಲ ಬಣ್ಣಕ್ಕೆ ಅಂಟಿಕೊಂಡಿಲ್ಲ. ಅದರ ಜತೆ ಜತೆಗೇ ಯೋಗಾಸನ, ಬ್ಯಾಡ್ಮಿಂಟನ್, ಕರಾಟೆ, ನೃತ್ಯಪಟು ಕೂಡ ಹೌದು.