'ಕಮಲಿ' ಧಾರಾವಾಹಿಯಲ್ಲಿ ಕಮಲಿ ತಂದೆಯಾಗಿ, 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಾಯಕನ ಅಪ್ಪನ ಪಾತ್ರ ಮಾಡುತ್ತಿರುವ ಮಿಥುನ್ ತೇಜಸ್ವಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇದ್ದು ಸಾಕಷ್ಟು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ ಮಿಥುನ್ ಅವರು ಒಂದು ವಿಚಾರವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ಕೊನೆಯಲ್ಲಿ ತಾವು ಏಕೆ ಈ ರೀತಿ ಬರೆದೆ ಎಂದು ವಿವರಿಸಿದ್ದಾರೆ. 'ನಾನು ನಿಮ್ಮಲ್ಲಿ ಏನೋ ಹಂಚಿಕೊಳ್ಳಬೇಕು. ಇತ್ತೀಚೆಗೆ ನಾನು ಸೂಪರ್ ಮಾರ್ಕೆಟಿಗೆ ಹೋಗಿದ್ದೆ. ಮಾಸ್ಕ್, ಸಾಮಾಜಿಕ ಅಂತರ , ಸುರಕ್ಷಿತ ಪ್ರವೇಶ ಎಲ್ಲಾ ಇತ್ತು. ನಾನು ಪಟ್ಟಿಯಲ್ಲಿರುವ ಎಲ್ಲಾ ವಸ್ತುಗಳನ್ನೆಲ್ಲಾ ತೆಗೆದುಕೊಂಡೆ. ಕೊನೆಯಲ್ಲಿ ಬಿಲ್ ಪಾವತಿಸಲು ಹಣ ತೆಗೆಯಲು ಹೋದಾಗ ನನ್ನ ಜೇಬಿನಿಂದ 2000 ರೂಪಾಯಿ ಕೆಳಗೆ ಬಿತ್ತು. ಎದುರು ನಿಂತಿದ್ದ ವ್ಯಕ್ತಿ ತಾನು ಖರೀದಿಸಿದ ವಸ್ತುಗಳಿಗೆ ಪಾವತಿ ಮುಗಿಸಿ ಆಗಿತ್ತು. ಆತ ನಿಧಾನಕ್ಕೆ ಬಾಗಿ ನನ್ನ ಹಣವನ್ನು ತೆಗೆದುಕೊಂಡನು.
ಎಷ್ಟು ವಿದ್ಯೆ, ವಿನಯ ಈ ಸಂಕಷ್ಟದಲ್ಲಿ ಎಂದು ಯೋಚಿಸಿದೆ. ಆತ ನನಗೆ ಹಣವನ್ನು ಹಿಂದಿರುಗಿಸಬಹುದು ಎಂದು ಕಾಯುತ್ತಿದ್ದೆ. ಜೊತೆಗೆ ನಾನು ಅವನಿಗೆ ಧನ್ಯವಾದ ತಿಳಿಸಲು ಕೂಡಾ ತಯಾರಾದೆ. ಆದರೆ ಮತ್ತೆ ನಡೆದ ಘಟನೆಯೇ ಬೇರೆ. ಆತ ನನ್ನಿಂದ ದೂರವಿರಲು ಪ್ರಯತ್ನಿಸಿದ. ಜೊತೆಗೆ ಅವನು ಹೇಳಿದ ಮಾತನ್ನು ಕೇಳಿ ಶಾಕ್ ಆಯಿತು. ನೆಲದ ಮೇಲೆ ಇರುವುದು ಅದನ್ನು ಪಡೆದವರಿಗೆ ಸೇರಬೇಕು ಎಂದು ಹೇಳಿ ಹೋದನು. ನನ್ನ ಸಮೀಪ ನಿಂತಿದ್ದ ಜನರು ಶಾಕ್ ಆಗಿ ನನ್ನನ್ನು ನೋಡಿ ತಮ್ಮಲ್ಲೇ ಏನನ್ನೋ ಗುಸುಗುಸು ಮಾತಾಡಿಕೊಂಡರು. ಆ ಕ್ಷಣದಲ್ಲಿ ನನ್ನನ್ನು ನಾನೇ ಮೌಲ್ಯಮಾಪನ ಮಾಡಬೇಕಿತ್ತು. ನನಗೆ ನಾನೇ ನ್ಯಾಯ ದೊರಕಿಸಬೇಕಿತ್ತು.
ನಾನು ಖರೀದಿಸಿದ ವಸ್ತುಗಳನ್ನು ಅಲ್ಲಿಯೇ ಬಿಟ್ಟೆ. ಕ್ರೆಡಿಟ್ ಕಾರ್ಡ್ ಮರೆತುಬಂದಿದ್ದ ಕಾರಣ ಬಿಲ್ ಪಾವತಿಸಲು ಸಾಧ್ಯವಾಗಲಿಲ್ಲ. ಸೀದಾ ಕಾರ್ ಪಾರ್ಕಿಂಗ್ಗೆ ತೆರಳಿದೆ. ನನ್ನ ಹತ್ತಿರದ ಸಾಲಿನಲ್ಲಿ ನಿಂತವರಿಗೆ ಈ ಘಟನೆಯ ಬಗ್ಗೆ ಕುತೂಹಲವಿತ್ತು. ನನ್ನ ಹಣ ತೆಗೆದುಕೊಂಡ ವ್ಯಕ್ತಿಯ ಬಳಿ ಹೋದ ನಾನು ಅವನಲ್ಲಿ ಹಣದ ಬಗ್ಗೆ ಮಾತನಾಡಿದೆ. ಆದರೆ ಅವನು ನನ್ನನ್ನು ತಿರಸ್ಕಾರದಿಂದ ನೋಡುತ್ತಿದ್ದನು. ಕಾರಿನ ಬಳಿ ಬಂದ ಆತ ಎರಡು ಚೀಲಗಳನ್ನು ನೆಲದ ಮೇಲೆ ಇರಿಸಿ ಜೇಬಿನಿಂದ ಕಾರ್ ಕೀ ತೆಗೆದು ಢಿಕ್ಕಿ ತೆರೆದ. ನಾನು ಕೂಡಲೇ ಅವನ ಬ್ಯಾಗ್ಗಳನ್ನು ತೆಗೆದುಕೊಂಡು ಅವನು ಹೇಳಿದಂತೆಯೇ ನೆಲದ ಮೇಲೆ ಇರುವುದು ಅದರನ್ನು ಪಡೆದವರಿಗೆ ಸೇರುತ್ತದೆ ಎಂದು ಹೇಳಿ ಓಡುತ್ತಾ ಅಲ್ಲಿಂದ ನಿರ್ಗಮಿಸಿದೆ.
ಸೇಡು ತೀರಿಸಿಕೊಂಡದ್ದಕ್ಕೆ ಹೆಮ್ಮೆ ಇತ್ತು. ಪ್ರೇಕ್ಷಕರು ಶ್ಲಾಘಿಸಲು ಆರಂಭಿಸಿದರು. ಮನೆಗೆ ಬಂದು ಚೀಲ ತೆರೆದು ನೋಡಿದಾಗ ಎರಡು ಕೆಜಿ ಸೀಗಡಿ , ಒಂದು ಕೆಜಿ ಸಾಲ್ಮನ್, ಚೀಸ್ ,ಮೊಸರು , ಧಾನ್ಯದ ಬ್ರೆಡ್ , ಒಂದು ಬಾಟಲ್ ವೈಟ್ ವೈನ್, ಎರಡು ಬಾಟಲ್ ರೆಡ್ ವೈನ್, ಸ್ಟ್ರಾಬೆರಿ ಜಾಮ್ , ಎರಡು ಕೆಜಿ ಒಳ್ಳೆ ಗುಣಮಟ್ಟದ ಸಲಾಮಿ, ಮಯೋನಿಸ್ ಇದ್ದವು. ನಾನು ಕೇವಲ 2000 ರೂಪಾಯಿಗಳಲ್ಲಿ ಇಷ್ಟು ಖರೀದಿ ಮಾಡಲು ಸಾಧ್ಯವಿಲ್ಲ. ಈಗ ನಾನು ಗ್ಲಾಸಿನಲ್ಲಿ ವೈನ್ ಕುಡಿದು , ಅಲ್ಲಿದ್ದ ಸ್ನ್ಯಾಕ್ಸ್ ತಿನ್ನುತ್ತಾ ನಾನು ಜಾಗರೂಕ ವ್ಯಕ್ತಿಯಾ ಅಥವಾ ಪ್ರತೀಕಾರ ತೀರಿಸಿಕೊಳ್ಳುವವನಾ ಎಂದು ಯೋಚಿಸುತ್ತಾ ಇರುವೆ.
ನೀವು ಇದನ್ನು ಇಲ್ಲಿಯವರೆಗೆ ಓದಿದ್ದೀರಾ? ಅಂದ ಹಾಗೆ ಇದು ನಿಜವಾಗಿಯೂ ಆದ ಘಟನೆ ಅಲ್ಲ. ಬದಲಿಗೆ ಇದು ಓದುವುದನ್ನು ಪ್ರಚಾರ ಮಾಡುವ ಅಭಿಯಾನವಷ್ಟೇ. ಓದುವುದು ಕಲ್ಪನಾಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಇದು ಮನಸನ್ನು ಪ್ರಚೋದಿಸುತ್ತದೆ. ಮಾತ್ರವಲ್ಲ ಸರಾಗವಾಗಿ ಓದುವುದರಿಂದ ಸಂವಹನಕ್ಕೂ ಕೂಡಾ ಇದು ಸಹಾಯಕಾರಿ ಎಂದು ಹೇಳಿಕೊಂಡಿದ್ದಾರೆ.