ಇಂದು ಮಹಾ ಶಿವರಾತ್ರಿ. ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಶಿವರಾತ್ರಿಯನ್ನು ಭಕ್ತರು ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಶಿವನ ಆರಾಧನೆಯನ್ನು ಬಹಳ ಶ್ರದ್ಧೆಯಿಂದ ಮಾಡುವ ಜನರು ಈ ದಿನ ಉಪವಾಸ, ಜಾಗರಣೆ ಮಾಡುತ್ತಾ ಆಚರಿಸುತ್ತಾರೆ. ಜನಸಾಮಾನ್ಯವರು ಮಾತ್ರವಲ್ಲದೆ ಸೆಲಬ್ರಿಟಿಗಳು ಕೂಡಾ ಶಿವನ ಆರಾಧನೆ ಮಾಡುತ್ತಾರೆ.
ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಸೆಲಬ್ರಿಟಿಗಳು ತಮ್ಮ ಮನೆಯವರೊಂದಿಗೆ ಶಿವರಾತ್ರಿ ಆಚರಿಸಿ ಸಂಭ್ರಮಿಸುತ್ತಾರೆ. 'ಇವಳು ಸುಜಾತಾ' ಧಾರಾವಾಹಿಯಲ್ಲಿ ನಾಯಕಿ ಸುಜಾತಾ ಆಗಿ ನಟಿಸುತ್ತಿರುವ ಮೇಘಶ್ರೀ ಕೂಡಾ ಬಹಳ ಭಕ್ತಿಯಿಂದ ಶಿವರಾತ್ರಿಯನ್ನು ಆಚರಿಸುತ್ತಾರೆ. ಪ್ರತಿ ವರ್ಷವೂ ಬಹಳ ಅದ್ದೂರಿಯಾಗಿ ಮಹಾ ಶಿವರಾತ್ರಿಯನ್ನು ಆಚರಣೆ ಮಾಡುತ್ತಿರುವ ಮೇಘಶ್ರೀಗೆ ಈ ಬಾರಿಯ ಶಿವರಾತ್ರಿ ತುಂಬಾ ಸ್ಪೆಷಲ್. ಏಕೆಂದರೆ ಅವರು ಈಗಾಗಲೇ ಜಾಗರಣೆ ಆರಂಭಿಸಿದ್ದಾರೆ. 'ಶಿವರಾತ್ರಿ ಹಬ್ಬದಂದು ಮನೆ ಮಂದಿಯೆಲ್ಲಾ ಜೊತೆ ಸೇರಿ ಜಾಗರಣೆ ಮಾಡುವುದು ಮಾಮೂಲಿ ಸಂಗತಿ. ಈ ಬಾರಿ ನನಗೆ ತುಂಬಾ ಸ್ಪೆಷಲ್. ಅದಕ್ಕೆ ಕಾರಣವೂ ಇದೆ. ಈ ಬಾರಿ ನಾನು ಮೂರು ದಿನಗಳು ಮುನ್ನವೇ ಜಾಗರಣೆ ಮಾಡಲು ಆರಂಭಿಸಿದ್ದೇನೆ. 'ಇವಳು ಸುಜಾತಾ' ಧಾರಾವಾಹಿಯ ಜೊತೆಗೆ ನಾನು ಸಿನಿಮಾವೊಂದರಲ್ಲಿ ನಟಿಸುತ್ತಿದ್ದು ಅದರ ಶೂಟಿಂಗ್ ಕೂಡಾ ಆರಂಭವಾಗಿದೆ. ಬೆಳಗ್ಗೆ 6 ಗಂಟೆಗೆ ಶೂಟಿಂಗ್ ಆರಂಭವಾದರೆ ಅದು ಮುಗಿಯುವುದು ಸಂಜೆ 6 ಕ್ಕೆ. ಕಾಕತಾಳೀಯ ಎಂದರೆ, ಶೂಟಿಂಗ್ ಆಗುತ್ತಿರುವುದು ಕೂಡಾ ಶಿವನ ದೇವಸ್ಥಾನದಲ್ಲಿ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು ನನಗೆ ಬಹಳ ಖುಷಿ ಆಗುತ್ತಿದೆ " ಎಂದು ವಿವರಿಸುತ್ತಾರೆ ಮೇಘಶ್ರೀ.