ನಮ್ಮ ಕನ್ನಡ ಸಿನಿಮಾಗಳು ಇತರ ಭಾಷೆಗೆ ರೀಮೇಕ್ ಆಗುವುದು ಸಹಜ. ಆದರೆ ಧಾರಾವಾಹಿಗಳು ರೀಮೇಕ್ ಆಗುವುದು ಬಹಳ ಅಪರೂಪ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಮನಸಾರೆ' ಧಾರಾವಾಹಿ ತಮಿಳಿಗೆ ರೀಮೇಕ್ ಆಗುತ್ತಿದೆ.
![Mansare remake to Tamil](https://etvbharatimages.akamaized.net/etvbharat/prod-images/9067457_672_9067457_1601988939121.png)
ಕುಟುಂಬಗಳ ನಡುವಿನ ಸಂಬಂಧಗಳ ಮೌಲ್ಯಗಳ ಮೇಲೆ ಒತ್ತು ನೀಡುವ ಈ ಧಾರಾವಾಹಿಯು ವೀಕ್ಷಕರ ಮನಸೆಳೆದಿದ್ದು ಇದೀಗ ಇದು ತಮಿಳಿಗೆ ರಿಮೇಕ್ ಆಗಿ ಸದ್ಯದಲ್ಲಿ ಪ್ರಸಾರವಾಗಲಿದೆ. ಹುಟ್ಟಿದಾಗಿನಿಂದ ತಂದೆಯ ಪ್ರೀತಿಗಾಗಿ ಹಂಬಲಿಸುವ ನಾಯಕಿ ಪ್ರಾರ್ಥನಾ ಪಾತ್ರದ ಸುತ್ತ ಕಥೆ ಸುತ್ತುತ್ತದೆ. ತನ್ನನ್ನು ದ್ವೇಷಿಸುವ ತಂದೆಯ ಪ್ರೀತಿಯನ್ನು ಪಡೆಯುವುದೇ ಪ್ರಾರ್ಥನಾ ಉದ್ದೇಶ. ಆಕೆಗೆ ತನ್ನ ಮಲತಾಯಿ ಹಾಗೂ ಸಹೋದರಿಯಿಂದ ಪ್ರೀತಿ ದೊರೆತರೂ ತಂದೆ ಪ್ರೀತಿಯಿಂದ ಮಾತ್ರ ವಂಚಿತಳಾಗಿರುತ್ತಾಳೆ. ಆಕೆ ತಂದೆಯ ಪ್ರೀತಿಯನ್ನು ಪಡೆಯುತ್ತಾಳಾ..ಇಲ್ಲವಾ ಎಂಬುದೇ ಧಾರಾವಾಹಿಯ ಕಥೆ.
![Mansare remake to Tamil](https://etvbharatimages.akamaized.net/etvbharat/prod-images/9067457_1056_9067457_1601988763120.png)
ಈ ಕಥೆ ತಮಿಳು ಪ್ರೇಕ್ಷಕರಿಗೂ ಇಷ್ಟವಾಗಬಹುದು ಎಂಬ ಕಾರಣಕ್ಕೆ ರೀಮೇಕ್ ಮಾಡಲು ನಿರ್ಧರಿಸಲಾಗಿದೆ. ಅಲ್ಲಿನ ನೇಟಿವಿಟಿಗೆ ತಕ್ಕಂತೆ ಧಾರಾವಾಹಿ ಕಥೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಸರಳ ಹಾಗೂ ಭಾವುಕ ಹುಡುಗಿ ಪ್ರಾರ್ಥನಾ ಆಗಿ ಪ್ರಿಯಾಂಕಾ ಚಿಂಚೋಳಿ ಅಭಿನಯಿಸುತ್ತಿದ್ದಾರೆ. ಇನ್ನು ಸುನಿಲ್ ಪುರಾಣಿಕ್ ಅವರು ಹಲವು ವರ್ಷಗಳ ನಂತರ ಮನಸಾರೆಯ ಮೂಲಕ ಕಿರುತೆರೆಗೆ ಮರಳಿದ್ದಾರೆ. ಉಳಿದಂತೆ ಸ್ವಾತಿ ,ರಾಜಲಕ್ಷ್ಮಿ , ಸುನೇತ್ರಾ , ರಮೇಶ್ ಪಂಡಿತ್, ಪ್ರಕೃತಿ ಪ್ರಸಾದ್, ಸಾಗರ್ ಬಿಳಿಗೌಡ ಮುಂತಾದವರು ನಟಿಸಿದ್ದಾರೆ. ಇತ್ತೀಚಿಗೆ ತಂಡವನ್ನು ಸೇರಿಕೊಂಡಿದ್ದ ನಟಿ ಯಮುನಾ ಶ್ರೀನಿಧಿ, ಮನಸಾರೆ ಧಾರಾವಾಹಿಯ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಈ ಧಾರಾವಾಹಿಯಲ್ಲಿ ನವರಸ ಅಭಿನಯ ತೋರಿಸಲು ಬಹಳ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.