ಡಾ. ವಿ. ನಾಗೇಂದ್ರ ಪ್ರಸಾದ್ ಎಂದರೆ ನೆನಪಾಗುವುದು ಅವರ ಸಾಹಿತ್ಯ. ನಾಗೇಂದ್ರ ಪ್ರಸಾದ್ ಕೇವಲ ಸಾಹಿತಿ ಮಾತ್ರವಲ್ಲದೆ ಉತ್ತಮ ನಟ ಹಾಗೂ ನಿರ್ದೇಶಕ ಕೂಡಾ. ಕಳೆದ ವರ್ಷ 'ಗೂಗಲ್' ಎಂಬ ಸಿನಿಮಾವನ್ನು ಅವರು ನಿರ್ದೇಶಿಸಿದ್ದರು.
ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರೂ ಆದ ಡಾ ವಿ. ನಾಗೇಂದ್ರ ಪ್ರಸಾದ್ ಇದೀಗ ‘ಉಘೇ ಉಘೇ ಮಾದೇಶ್ವರ’ ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೂ ಕಾಲಿಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿ-ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ಓಜಯ್ಯ ಎಂಬ ಪ್ರಮುಖ ಖಳನಟನ ಪಾತ್ರದಲ್ಲಿ ನಾಗೇಂದ್ರ ಪ್ರಸಾದ್ ನಟಿಸುತ್ತಿದ್ದಾರೆ.
‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಯಶಸ್ವಿ ಆರು ತಿಂಗಳು ಪೂರೈಸಿದ್ದು, ಈ ಹಂತದಲ್ಲಿ ಕಥೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪಯಣದಲ್ಲಿ ಬರುವುದೇ ‘ಓಜಯ್ಯನ ಸಾಲು’. ಓಜಯ್ಯ ಎಂಬ ದುಷ್ಟಬುದ್ಧಿಯ ಶಿಕ್ಷಕ, ಶಿಷ್ಯಂದಿರಲ್ಲಿ ತಾರತಮ್ಯ ಮಾಡುತ್ತಾ, ಜಾತಿಭೇದ ಮೆರೆಯುತ್ತಿರುತ್ತಾನೆ. ಓಜಯ್ಯನ ಪಾತ್ರವನ್ನು ಡಾ. ನಾಗೇಂದ್ರ ಪ್ರಸಾದ್ ನಿರ್ವಹಿಸಿದರೆ ಪತ್ನಿಯಾಗಿ ಕಿರುತೆರೆ ನಟಿ ಸಂಜನಾ ನಟಿಸುತ್ತಿದ್ದಾರೆ. ದೊಡ್ಡಯ್ಯನಾಗಿ ಶೃಂಗೇರಿ ರಾಮಣ್ಣ, ಸಿದ್ದಮ್ಮನಾಗಿ ಕೀರ್ತಿ ಭಟ್, ಸಿದ್ದೇಶನಾಗಿ ಮಾ. ಶ್ರೇಯಸ್, ಓಜಯ್ಯನ ಮಗನಾಗಿ ಮಾ. ವಿಶಾಲ್ ನಟಿಸುತ್ತಿದ್ದಾರೆ.
‘ನಟಿಸಬೇಕು ಎಂದ ಮೇಲೆ ಒಳ್ಳೆಯ ಪಾತ್ರ ಕೆಟ್ಟ ಪಾತ್ರ ಅಂತ ಇರುವುದಿಲ್ಲ. ಖಳ ನಾಯಕನ ಛಾಯೆ ಇರುವ ಪಾತ್ರದಲ್ಲಿ ನಟಿಸುವುದು ಸವಾಲೇ ಸರಿ. ಓಜಯ್ಯನ ಪಾತ್ರಕ್ಕಾಗಿ ಮುಖವರ್ಣಿಕೆ, ಉಡುಗೆ, ಭಾಷೆ, ಆಂಗಿಕ ಅಭಿನಯ ಎಲ್ಲಾ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇನೆ. ಪಾತ್ರ ಚೆನ್ನಾಗಿ ಮೂಡಿ ಬರುತ್ತಿದೆ. ಮಾದೇಶ್ವರ ಮಹಾಕಾವ್ಯ ನನ್ನ ಇಷ್ಟದ ಕಾವ್ಯ. ಅದರಲ್ಲಿ ಪಾತ್ರ ಮಾಡುತ್ತಿರುವುದು ಹೆಚ್ಚಿನ ಖುಷಿ ತಂದಿದೆ’ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.