ಲಾಕ್ಡೌನ್ ಆದ ನಂತರ ಶೂಟಿಂಗ್ ಇಲ್ಲದ ಕಾರಣದಿಂದಾಗಿ ಕೆಲವು ನಟರು ತಮ್ಮ ಮನೆಯವರ ಜೊತೆ ಸಮಯ ಕಳೆಯುತ್ತಿದ್ದಾರೆ. ಮತ್ತೆ ಕೆಲವರು ನಿರ್ಗತಿಕರಿಗೆ ಆಹಾರದ ಪ್ಯಾಕೆಟ್ ವಿತರಣೆ ಮಾಡುವಲ್ಲಿ ಬ್ಯೂಸಿಯಾಗಿದ್ದಾರೆ.
ಇದೀಗ ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರು ಈ ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.
ಕಿರುತೆರೆ ನಟ ಕಿರಣ್ ರಾಜ್ ಮತ್ತು ಅವರ ತಂಡವು ಕಿರಣ್ ರಾಜ್ ಫೌಂಡೇಶನ್ ಮೂಲಕ ಊಟವನ್ನು ಒದಗಿಸಲು ಬೆಂಗಳೂರಿನಾದ್ಯಂತ ಹಲವಾರು ಸ್ಥಳಗಳಿಗೆ ಭೇಟಿ ನೀಡುತ್ತಿದ್ದು, ಕಿರಣ್ ರಾಜ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇದೀಗ ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಕಿರಣ್, “ನಿರ್ಗತಿಕ ವರ್ಗದ ಜನರು ಹಸಿವಿನಿಂದ ಬಳಲುತ್ತಿರುವದನ್ನು ನೋಡಿ ಮನಸ್ಸಿಗೆ ನೋವಾಯಿತು. ನಾನು ಕಿರಣ್ ರಾಜ್ ಫೌಂಡೇಶನ್ ರೂಪಿಸಲು ಇದು ಮುಖ್ಯ ಕಾರಣವಾಗಿದೆ, ಈ ಫೌಂಡೇಶನ್ ಜನರಿಗೆ ಆಹಾರ ವಿತರಿಸಲು ವರ್ಷಪೂರ್ತಿ ಕೆಲಸ ಮಾಡುತ್ತದೆ” ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಲಾಕ್ ಡೌನ್ ಆದಾಗಲೂ, ಕಿರಣ್ ರಾಜ್ ಅವರ ಕೆಲಸ ನೋಡಿ, ಜನರು ವಿಶೇಷವಾಗಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ಶೂಟಿಂಗ್ ಸ್ಥಗಿತಗೊಳಿಸಲಾಗಿರುವುದರಿಂದ ಕಿರಣ್ ರಾಜ್ ಅವರು ಪ್ರಸ್ತುತ ಅಗತ್ಯವಿರುವವರಿಗೆ ಊಟವನ್ನು ವಿತರಿಸಲು ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.
ಕಿರಣ್ ರಾಜ್ ಅವರು ಕನ್ನಡತಿ ಧಾರಾವಾಹಿಯಲ್ಲಿ ಹರ್ಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೀಕ್ಷಕರು ಈ ಪಾತ್ರವನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಲಾಕ್ ಡೌನ್ ಘೋಷಿಸುವ ಮೊದಲು, ಅವರು ಚಾಮರಾಜನಗರದಲ್ಲಿ ತಮ್ಮ ಮುಂಬರುವ ಚಿತ್ರ ಬಹದ್ದೂರ್ ಗಂಡು ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರದಲ್ಲಿ ಯಶ ಶಿವಕುಮಾರ್ ನಾಯಕಿಯಾಗಿ ನಟಿಸಿದ್ದಾರೆ.