ಕಿರಣ್ ರಾಜ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ನಾಯಕ ನಕುಲ್ ಪಾತ್ರಧಾರಿಯಾಗಿ ವೀಕ್ಷಕರ ಗಮನ ಸೆಳೆದ ನಟ. ವೈಯಕ್ತಿಕ ಕಾರಣಗಳಿಂದಾಗಿ ಕೆಲ ದಿನಗಳಿಂದ ನಟೆನೆಯಿಂದ ದೂರವಿದ್ದ ಕಿರಣ್, ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ತಯಾರಾಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ 'ಕನ್ನಡತಿ' ಧಾರಾವಾಹಿಯಲ್ಲಿ ಕಿರಣ್ ರಾಜ್ ನಾಯಕನಾಗಿ ನಟಿಸಲಿದ್ದು, ಈ ಮೂಲಕ ಮತ್ತೆ ಕಿರುತೆರೆ ಪಯಣ ಆರಂಭಿಸಲಿದ್ದಾರೆ. ಬಾಲ್ಯದಿಂದಲೂ ಸಿನಿಮಾ ನಿರ್ದೇಶನ ಮಾಡಬೇಕೆಂಬ ಬಯಕೆ ಹೊಂದಿದ್ದ ಕಿರಣ್, ಬಣ್ಣದ ಲೋಕಕ್ಕೆ ಪರಿಚಿತರಾದದ್ದು 'ದೇವತೆ' ಧಾರಾವಾಹಿಯ ಮೂಲಕ. ನಿರ್ದೇಶನದತ್ತ ಸೆಳೆತ ಹೆಚ್ಚಾಗಿದ್ದ ಕಾರಣ, ಪದವಿ ಮುಗಿದ ಕೂಡಲೇ ಈತ ಹಾರಿದ್ದು ದೂರದ ಮುಂಬೈಗೆ. ಅಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಿದ ನಂತರ ಅವರಿಗೆ ದೊರೆತ ಸಣ್ಣ ಪುಟ್ಟ ಅವಕಾಶಗಳನ್ನು ಬಾಚಿದರು. ಇದರಿಂದ ಅವರು ಜೀ ಟಿವಿ, ಸ್ಟಾರ್ ಪ್ಲಸ್, ಬಿಂದಾಸ್, ಜೀ ಕೆಫೆ ಹೀಗೆ ಹಿಂದಿ ಚಾನೆಲ್ಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.
ಪರಭಾಷೆಯಲ್ಲಿ ನಟಿಸಿ ಮನೆ ಮಾತಾಗಿದ್ದ ಕಿರಣ್ ರಾಜ್, ಕನ್ನಡಕ್ಕೆ ಕಾಲಿರಿಸಿದ್ದು ರಿಯಾಲಿಟಿ ಶೋ ಮೂಲಕ. 'ಲೈಫ್ ಸೂಪರ್ ಗುರು' ಶೋ ಮೂಲಕ ಕಾಣಿಸಿಕೊಂಡ ಕಿರಣ್ ರಾಜ್ ಮುಂದೆ ಡ್ಯಾನ್ಸ್ ಡ್ಯಾನ್ಸ್ ಸೇರಿದಂತೆ ಅನೇಕ ಶೋಗಳಲ್ಲಿ ಭಾಗವಹಿಸಿದ್ದರು. 'ದೇವತೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಬಳಿಕ 'ಕಿನ್ನರಿ' ಧಾರಾವಾಹಿಯ ನಕುಲ್ ಆಗಿ ಖ್ಯಾತರಾದರು. ಆ್ಯಕ್ಟಿಂಗ್ ಜೊತೆಗೆ ಡ್ಯಾನ್ಸ್ನಲ್ಲೂ ಆಸಕ್ತಿ ಇರುವ ಕಿರಣ್ ಕಾಲೇಜು ದಿನಗಳಲ್ಲೇ ಡ್ಯಾನ್ಸ್ ಕೊರಿಯೋಗ್ರಫಿ ಮಾಡುತ್ತಿದ್ದರು. ಇದೀಗ 'ಕಲರ್ಸ್ ಕನ್ನಡದ 'ಕನ್ನಡತಿ' ಧಾರಾವಾಹಿಯ ನಾಯಕನಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ. ನಟನೆಗೆ ಬಂದ ಮೇಲೆ ಜೀವನ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಂಡೆ ಎಂದು ಹೇಳುವ ಕಿರಣ್ ರಾಜ್, ಕೇವಲ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ.