ಚಿಕ್ಕಂದಿನಿಂದಲೂ ನೃತ್ಯಗಾರನಾಗಬೇಕೆಂಬ ಹಂಬಲ ಹೊಂದಿದ್ದ ಅಜಯ್ ಅವರಿಗೆ ಡ್ಯಾನ್ಸ್ ಮಾಡುವುದೆಂದರೆ ಪಂಚಪ್ರಾಣ. ವೇದಿಕೆ ನೋಡಿದರಂತೂ ಅಜಯ್ ಅವರ ಕಾಲುಗಳು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಹರ್ಷ ಅವರ ಎಕ್ಸ್ಟ್ರೀಮ್ಸ್ ತಂಡ ಸೇರಿದ ಅಜಯ್, ಹಗಲು ರಾತ್ರಿ ನೃತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅಜಯ್ ಅವರು ಬರೋಬ್ಬರಿ 6 ವರ್ಷಗಳ ಕಾಲ ಆ ತಂಡದಲ್ಲಿದ್ದರು. ತದ ನಂತರ ಬದಲಾವಣೆ ಬಯಸಿ ಶ್ಯಾಡೋಸ್ ತಂಡ ಸೇರಿ ಅಲ್ಲಿಯೂ ಆರುನೂರು ಶೋಗಳನ್ನು ಕೊಟ್ಟಿದ್ದಾರೆ.
ಕಾಲೇಜು ದಿನಗಳಿಂದಲೇ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಅಜಯ್ ನೃತ್ಯದ ಜೊತೆಗೆ ನಾಟಕಾಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ತಮ್ಮದೇ ತಂಡ ಕಟ್ಟಿಕೊಂಡು ವರದಕ್ಷಿಣೆ ಪಿಡುಗು, ಬಾಲ್ಯವಿವಾಹ, ಸಮಾಜದ ಪಿಡುಗುಗಳ ಬಗ್ಗೆ ಬೀದಿ ನಾಟಕ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಬಿಕಾಂ ಮುಗಿಸಿ 5 ವರುಷ ಕೆಲಸ ಮಾಡಿದ್ದ ಅಜಯ್ ಅವರಿಗೆ ಅದು ರುಚಿಸಲಿಲ್ಲ.
ಬಣ್ಣದ ಲೋಕದಲ್ಲಿ ಮುಂದುವರಿಯುವ ನಿರ್ಧಾರ ಮಾಡಿದ ಅಜಯ್ ಮುಂದೆ ಧಾರಾವಾಹಿಗಳ ಆಡಿಷನ್ಗೆ ತೆರಳಿದರು. ಆಡಿಷನ್ನಲ್ಲಿ ಆಯ್ಕೆಯಾದ ಅಜಯ್, ಸೀತೆ ಧಾರಾವಾಹಿಯಲ್ಲಿ ಕುಬೇರನ ಮಗ ನವಕುಮಾರನ ಪಾತ್ರ ಮಾಡಿದ್ದರು. ಜೊತೆಗೆ ನಾಟಕಕ್ಕೂ, ಧಾರಾವಾಹಿಗೂ ಇರುವ ವ್ಯತ್ಯಾಸ ಏನೆಂಬುದನ್ನು ಕೂಡಾ ಅವರು ತಿಳಿದ್ದರು. ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೀರೋ ನಂ. 1 ರಿಯಾಲಿಟಿ ಶೋ ನಲ್ಲಿ ಆಯ್ಕೆಯಾದ ಅಜಯ್ ಟಾಪ್ 5 ಸ್ಥಾನದಲ್ಲಿದ್ದರು. ಮುಂದೆ ರವಿ.ಆರ್ ಗರಣಿ ನಿರ್ದೇಶನದ ಪ್ರಿಯದರ್ಶಿನಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಇದು ಅವರ ನಟನಾ ಬದುಕಿಗೆ ತಿರುವು ನೀಡಿತು.
ನಾಯಕನಾಗಿ ಅಭಿನಯಿಸಿ ಮನೆ ಮಾತಾಗಿರುವ ಅಜಯ್ ಖಳನಾಯಕನ ಪಾತ್ರದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕುಲವಧುವಿನಲ್ಲಿ ಖಳನಾಯಕನಾಗಿ ಕಾಣಿಸಿಕೊಂಡ ಅಜಯ್ ಮುಂದೆ ಪಂಚಕಜ್ಜಾಯ, ಮಂಗ್ಳೂರು ಹುಡುಗಿ, ಹುಬ್ಬಳ್ಳಿ ಹುಡುಗ, ಮಾಯಾ, ಕಿನ್ನರಿ ಹಾಗೂ ಅಪರಂಜಿ ಧಾರಾವಾಹಿಗಳಲ್ಲಿ ನಟಿಸಿರುವ ಅವರು ಇದೀಗ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದರ ಜೊತೆಗೆ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಶುಭಸಂಕಲ್ಪಂ' ನಲ್ಲಿಯೂ ನಾಯಕ ಪಾತ್ರ ನಿರ್ವಹಿಸುತ್ತಿರುವ ಅಜಯ್ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಸೋಜಿಗ ಚಿತ್ರದಲ್ಲಿ ನಾಯಕ ಹಾಗೂ ಗಾಂಚಾಲಿ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಇವರು ಜಾಹೀರಾತುಗಳಲ್ಲಿಯೂ ಮಿಂಚಿದ್ದಾರೆ. ತಮಿಳು ನಟಿ ಸ್ನೇಹಾ ಅವರೊಂದಿಗೆ ಕಾಂಪ್ಲಾನ್ ಜಾಹೀರಾತು, ಬ್ರೂ ಜಾಹೀರಾತುಗಳಲ್ಲಿ ಅಜಯ್ ಕಾಣಿಸಿಕೊಂಡಿದ್ದಾರೆ.