ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತಿದ್ದ ಮತ್ತೊಂದು ಧಾರಾವಾಹಿ ಶಾಶ್ವತವಾಗಿ ಪ್ರಸಾರ ನಿಲ್ಲಿಸಲಿದೆ. ಸೃಜನ್ ಲೋಕೇಶ್ ಅವರ ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿ ಪ್ರಸಾರವಾಗುತ್ತಿದ್ದ 'ಇವಳು ಸುಜಾತಾ' ಧಾರಾವಾಹಿ ಮುಕ್ತಾಯ ಹಂತ ತಲುಪಿದ್ದು ಮುಂದಿನ ವಾರ ಕೊನೆಯ ಸಂಚಿಕೆ ಪ್ರಸಾರ ಕಾಣಲಿದೆ.

ತೇಜಸ್ವಿ ನಿರ್ದೇಶನದ ಇವಳು 'ಸುಜಾತಾ ಧಾರಾವಾಹಿ' ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಶ್ರೀಮಂತ ಮನೆಯ ಹುಡುಗ ಪಾರ್ಥ, ವಿಧವೆ ಸುಜಾತಳನ್ನು ನೋಡಿ ಇಷ್ಟಪಡುತ್ತಾನೆ. ಸುಜಾತ ಗುಣಕ್ಕೆ ಮರುಳಾಗುವ ಪಾರ್ಥ ಆಕೆ ವಿಧವೆ ಎಂದು ತಿಳಿದಿದ್ದರೂ ಆಕೆಯನ್ನು ಪ್ರೀತಿಸುತ್ತಾನೆ. ಆದರೆ ಆಕೆ ಪಾರ್ಥನಿಗಿಂತ 3 ವರ್ಷ ದೊಡ್ಡವಳಾದ ಕಾರಣ ಪಾರ್ಥ ಮನೆಯಲ್ಲಿ ಈ ಪ್ರೀತಿಗೆ ವಿರೋಧವಿರುತ್ತದೆ.

ಇತ್ತ ಪ್ರೀತಿಸಿ ಮದುವೆಯಾದ ಗಂಡನನ್ನು ಕಳೆದುಕೊಂಡಿರುವ ಸುಜಾತಾ ತನ್ನ ತಂದೆ-ತಾಯಿಯ ಜೊತೆಗಿದ್ದರೂ ಅತ್ತೆ ಮಾವನನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಆದರೆ ಅತ್ತೆ ಮಾತ್ರ ಆಕೆಗೆ ಆಗ್ಗಾಗ್ಗೆ ಅನುಮಾನ ಮಾಡುತ್ತಿರುತ್ತಾಳೆ. ತನ್ನ ಮಗನನ್ನು ಕೊಂದವಳು ಎಂದು ನಿಂದಿಸುತ್ತಿರುತ್ತಾಳೆ. ಅಮ್ಮನ ಮನೆಯಲ್ಲೂ ಸುಜಾತಾಗೆ ನೆಮ್ಮದಿ ಇರುವುದಿಲ್ಲ. ಅತ್ತಿಗೆ ಸುಜಾತಾಗೆ ಹಿಂಸೆ ನೀಡುತ್ತಾಳೆ.

ಇದೇ ಸಮಯದಲ್ಲಿ ಸುಜಾತಾಗೆ ಪಾರ್ಥ ಪ್ರಪೋಸ್ ಮಾಡುತ್ತಾನೆ. ಪತಿ ನೆನಪಿನಲ್ಲೇ ದಿನ ದೂಡುತ್ತಿರುವ ಸುಜಾತಾ ಪಾರ್ಥನನ್ನು ಒಪ್ಪುತ್ತಾಳಾ..? ಸುಜಾತಾ ಕಷ್ಟ ಕೊನೆಗೊಳ್ಳುವುದಾ ಎಂಬುದು ಧಾರಾವಾಹಿಯ ಕಥಾ ಹಂದರ. ಇದು ಮರಾಠಿ ಧಾರಾವಾಹಿಯ ರೀಮೇಕ್ ಆಗಿದೆ. 'ಇವಳು ಸುಜಾತಾ' ಧಾರಾವಾಹಿಯಲ್ಲಿ ನಾಯಕನ ಅಮ್ಮನಾಗಿ ಅಪರ್ಣಾ ವಸ್ತಾರೆ , ಅಜ್ಜಿಯ ಪಾತ್ರದಲ್ಲಿ ಗಿರಿಜಾ ಲೋಕೇಶ್ ನಟಿಸಿದ್ದಾರೆ. ಈ ಧಾರಾವಾಹಿ ಮೂಲಕ ಸುಮಾರು 5 ವರ್ಷಗಳ ನಂತರ ಅಪರ್ಣಾ ಕಿರುತೆರೆಗೆ ವಾಪಸ್ ಬಂದಿದ್ದಾರೆ.