ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂಮಳೆ ಧಾರಾವಾಹಿಯಲ್ಲಿ ಕಾರ್ಪೊರೇಟ್ ಕಾವೇರಿ ಸೊಸೆ, ನಾಯಕಿ ಲಹರಿಯ ಅತ್ತಿಗೆ ಶೋಭಾ ಆಗಿ ಅಭಿನಯಿಸುತ್ತಿರುವ ಚಿಕ್ಕಮಗಳೂರಿನ ಚೆಲುವೆಯ ಹೆಸರು ಆರೋಹಿ ನೈನಾ.
ಮೂಲತಃ ನೃತ್ಯಗಾರ್ತಿಯಾಗಿದ್ದ ಆರೋಹಿ ಎಂದಿಗೂ ನಟಿಯಾಗಬೇಕು ಎಂದು ಬಯಸಿದವರಲ್ಲ. ಆಕಸ್ಮಿಕವಾಗಿ ಬಂದ ಅವಕಾಶದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಆರೋಹಿ ಇಂದು ಮನೋಜ್ಞ ನಟನೆಯ ಮೂಲಕ ನಟನಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.
ಓದಿ: ಮತ್ತೆ ಶಿವನ ಪಾತ್ರದಲ್ಲಿ ನಟ ಆರ್ಯನ್ ಸೂರ್ಯ, ಯಾವ ಸೀರಿಯಲ್ ಗೊತ್ತಾ?
ಚಿಕ್ಕಮಗಳೂರಿನ ಎಸ್ಟೇಟ್‌ವೊಂದರಲ್ಲಿ ಶೂಟಿಂಗ್ ನಡೆಯುತ್ತಿದೆ ಎಂಬ ವಿಷಯ ತಿಳಿದ ಆರೋಹಿ ಶೂಟಿಂಗ್ ನೋಡಲು ಅಲ್ಲಿಗೆ ತೆರಳಿದರು. ಅದು ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು.
ಆರೋಹಿಯನ್ನು ಕಂಡ ಸೀರಿಯಲ್ ಮ್ಯಾನೇಜರ್ ನೀವ್ಯಾಕೆ ಸೀರಿಯಲ್‌ಗಳಲ್ಲಿ ನಟಿಸಬಾರದು, ಅವಕಾಶ ಸಿಕ್ಕರೆ ಬಿಡಬೇಡಿ ಎಂದಿದ್ದರು.
ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡ ಕಾಫಿನಾಡಿನ ಕುವರಿ ಸೀರಿಯಲ್ ಆಡಿಷನ್ಗಳಲ್ಲಿ ಭಾಗವಹಿಸಲಾರಂಭಿಸಿದರು. ಸತತ ಪ್ರಯತ್ನದ ಬಳಿಕ 'ಇವಳು ಸುಜಾತಾ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿತು.
ಇವಳು ಸುಜಾತಾ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ ಆರೋಹಿಗೆ ಮುಂದೆ 'ಹೂಮಳೆ' ಧಾರಾವಾಹಿಯಲ್ಲಿ ನಾಯಕಿಯ ಅತ್ತಿಗೆ ಶೋಭಾ ಪಾತ್ರ ದೊರಕಿದಾಗ ಆದ ಸಂತಸ ಅಷ್ಟಿಷ್ಟಲ್ಲ.
ಮೊದಲಿಗೆ ವಯಸ್ಸಿಗೂ ಮೀರಿದ ಪಾತ್ರ, ಬಣ್ಣ ಹಚ್ಚಲು ಸಾಧ್ಯವೇ, ಮುಖ್ಯವಾಗಿ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವೇ ಎಂಬ ಅಳುಕು ಕಾಡಿತ್ತು. ಆದರೆ, ದೊರೆತಿರುವಂತಹ ಅವಕಾಶ ಕಳೆದುಕೊಳ್ಳಬಾರದು ಎಂದು ನಟಿಸಲು ಒಪ್ಪಿಕೊಂಡ ಆರೋಹಿ ಇಂದು ಶೋಭಾ ಆಗಿ ಚಿರಪರಿಚಿತರು.
"ಆಚಾನಕ್ ಆಗಿ ಬಣ್ಣ ಪಯಣ ಶುರು ಮಾಡಿದ ನಾನು ಇಂದು ಶೋಭಾ ಪಾತ್ರದ ಮೂಲಕ ಗುರುತಿಸಿಕೊಂಡಿದ್ದೇನೆ. ನಾನಿಂದು ಕಲಾವಿದೆಯಾಗಿದ್ದೇನೆ ಅಂದರೆ ಅದಕ್ಕೆ ನನ್ನ ಪೋಷಕರು ಮತ್ತು ಅಕ್ಕ ನೀಡಿದ ಪ್ರೋತ್ಸಾಹವೇ ಮುಖ್ಯ ಕಾರಣ" ಎಂದು ಹೇಳುತ್ತಾರೆ ಆರೋಹಿ ನೈನಾ.