ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿ ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿದೆ. ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದ 'ಗೀತಾ' ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ದುರಹಂಕಾರದ ಹುಡುಗ ಮತ್ತು ಛಲಗಾತಿ ಹುಡುಗಿಯು ಜೀವನದಲ್ಲಿ ಜೊತೆಯಾದರೆ ಜೀವನ ಹೇಗಿರಬಹುದು ಎಂಬುದೇ 'ಗೀತಾ' ಧಾರಾವಾಹಿಯ ಕಥಾ ಹಂದರ. ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ನಾಯಕಿ ಗೀತಾಗೆ, ಶಾಸಕನಾಗಿರುವ ಅಪ್ಪನ ಹಣದ ದರ್ಪದಲ್ಲಿ ಮೆರೆಯುತ್ತಿರುವ ವಿಜಯ್ಗೆ ದುರಂಹಕಾರ. ಈ ಜೋಡಿ ಈಗ ಒಂದಾಗಿದೆ. ತಾನೇ ದೊಡ್ಡವನು, ತನ್ನಿಂದಲೇ ಎಂದು ಅಹಂಕಾರದಿಂದ ಮೆರೆದಾಡುವ ವಿಜಯ್ಗೆ ಸ್ವಾಭಿಮಾನಿ ಗೀತಾ ಪಾಠ ಕಲಿಸುತ್ತಾಳಾ..? ಅವನನ್ನು ಬದಲಾಯಿಸುತ್ತಾಳಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕು.
ರಾಮ್ ಜಿ ನಿರ್ದೇಶನದ 'ಗೀತಾ' ಧಾರಾವಾಹಿಯಲ್ಲಿ ನಾಯಕಿ ಗೀತಾ ಆಗಿ ಭವ್ಯ ಗೌಡ ಅಭಿನಯಿಸಿದ್ದರೆ, ನಾಯಕ ವಿಜಯ್ ಆಗಿ ಧನುಷ್ ಗೌಡ ನಟಿಸಿದ್ದಾರೆ. ಆ ಮೂಲಕ ಇಬ್ಬರು ಹೊಸ ಪ್ರತಿಭೆಗಳು ನಟನಾ ರಂಗಕ್ಕೆ ಕಾಲಿಟ್ಟಿದ್ದಾರೆ. ಉಳಿದಂತೆ ನೀನಾಸಂ ಅಶ್ವಥ್, ಮನದೀಪ್ ರಾಯ್, ಶೋಭಾರಾಜ್ ಪಾವೂರು, ಶರ್ಮಿತಾ ಗೌಡ ಮುಂತಾದವರು ಕಾಣಿಸಿಕೊಂಡಿದ್ದಾರೆ.