ನಟಿ, ಡ್ಯಾನ್ಸರ್, ಡಬ್ಸ್ಮ್ಯಾಶ್, ಸಿಂಗರ್, ಟಿಕ್ಟಾಕ್ ಸ್ಟಾರ್ ದಿಶಾ ಮದನ್ ಬಹಳಷ್ಟು ಜನರಿಗೆ ಗೊತ್ತು. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಕೂಡಾ ಹೆಜ್ಜೆ ಹಾಕಿರುವ ದಿಶಾ ಮದನ್, ವೀಕ್ಷಕರಿಗೆ ಪರಿಚಿತರಾದದ್ದು ಕಿರಿತೆರೆ ಮೂಲಕ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ವಚನಾ ಪಾತ್ರಧಾರಿಯಾಗಿ ಗಮನ ಸೆಳೆದಿರುವ ದಿಶಾ ಮದನ್ ಟಿಕ್ಟಾಕ್, ಡಬ್ಸ್ಮ್ಯಾಶ್ ಸ್ಟಾರ್ ಆಗಿಯೂ ಫೇಮಸ್. ಇದರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ದೇಶನದ 'ಹೇಟ್ ಯು ರೋಮಿಯೋ' ವೆಬ್ ಸಿರೀಸ್ನಲ್ಲಿ ಕೂಡಾ ಬಣ್ಣ ಹಚ್ಚಿದ್ದಾರೆ. ತಮ್ಮ ಬಹು ವರ್ಷದ ಗೆಳೆಯ ಶಶಾಂಕ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ದಿಶಾ ಮದನ್ ಮತ್ತೆ ಸುದ್ದಿಯಾದದ್ದು ಗರ್ಭಿಣಿ ಯಾದಾಗ. ಅದಕ್ಕೆ ಕಾರಣ ಫೋಟೋಶೂಟ್. ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿ ಸುದ್ದಿಯಲ್ಲಿದ್ದ ದಿಶಾ ಮದನ್ ಅವರ ಅಂದದ ಸಂಸಾರಕ್ಕೆ ಪುಟ್ಟ ರಾಜಕುಮಾರನ ಆಗಮನವಾಗಿರುವುದು ನಮಗೆಲ್ಲಾ ತಿಳಿದೇ ಇದೆ.
ಇದೀಗ ತಮ್ಮ ಮುದ್ದು ರಾಜಕುಮಾರನ ಹೆಸರಿನಲ್ಲಿ ಬುಬ್ಬಾವಿ ಎಂಬ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದಾರೆ ದಿಶಾ. ಆಶ್ಚರ್ಯಕರ ಸಂಗತಿಯೆಂದರೆ ಆ ಪುಟ್ಟ ಮಗುವಿಗೆ ಈಗಾಗಲೇ 15 ಸಾವಿರ ಫಾಲೋವರ್ಸ್ಗಳಿದ್ದಾರೆ. ಮಗ ವಿಯಾನ್ ಶಶಾಂಕ್ ವಾಸುಕಿಗೆ ಈಗಾಗಲೇ ಎರಡು ತಿಂಗಳು ತುಂಬಿದ್ದು, ಪುಟ್ಟ ಕಂದಮ್ಮನ ಫೋಟೋಶೂಟ್ ಕೂಡಾ ಈಗಾಗಲೇ ಮಾಡಿಸಿದ್ದಾರೆ ದಿಶಾ. ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳು ಹರಿದಾಡುತ್ತಿವೆ. ಈಗಾಗಲೇ ಹಲವಾರು ಸೆಲಬ್ರಿಟಿಗಳ ಫೋಟೋಶೂಟ್ ಮಾಡಿ ಸೈ ಎನಿಸಿಕೊಂಡಿರುವ ಅಮೃತಾ, ದಿಶಾ ಮದನ್ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ.