ಶ್ರುತಿ ನಾಯ್ಡು ನಿರ್ಮಾಣದಲ್ಲಿ ರಮೇಶ್ ಇಂದಿರಾ ನಿರ್ದೇಶಿಸಿರುವ ವಿಭಿನ್ನ ಕಥಾ ಹಂದರ ಒಳಗೊಂಡ 'ಬ್ರಹ್ಮಗಂಟು' ಧಾರಾವಾಹಿ ಪ್ರಸಾರ ಆರಂಭಿಸಿ ಇಂದಿಗೆ 3 ವರ್ಷಗಳು ತುಂಬಿವೆ. ಕೆಲವೇ ದಿನಗಳಲ್ಲಿ ಧಾರಾವಾಹಿಯ ಫ್ರೆಷ್ ಎಪಿಸೋಡ್ಗಳು ಪ್ರಸಾರವಾಗಲಿವೆ.
ಗುಂಡಮ್ಮ ಅಲಿಯಾಸ್ ಗೀತಾ, ಪರೋಪಕಾರದ ಮನೋಭಾವ ಹೊಂದಿರುವ ಹುಡುಗಿ, ಊರಿನ ಜನರ ಕಷ್ಟಕ್ಕೆ ಮರುಗುವ ಮುಗ್ಧ ಮನಸ್ಸಿನ ಚೆಲುವೆ. ಎಲ್ಲರಿಗೂ ಒಳಿತು ಮಾಡುವ ಗೀತಾಗೆ ಜೀವನದಲ್ಲಿ ಇದ್ದದ್ದು ಒಂದೇ ಕನಸು. ಆಕೆ ಮದುವೆ ಆಗುವ ಹುಡುಗ ಸುಂದರನಾಗಿರಬೇಕು ಎನ್ನವುದು. ಆಕೆಯ ಆಸೆ ಈಡೇರಿತು ನಿಜ, ಆದರೆ ಆತನಿಗೆ ಅವಳೆಂದರೆ ಕಿಂಚಿತ್ತೂ ಇಷ್ಟವಿರಲಿಲ್ಲ. ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಗಂಡು-ಹೆಣ್ಣು ಜೊತೆಯಾದಾಗ ಏನಾಗುತ್ತದೆ, ನಾಯಕ ಲಕ್ಕಿಗೆ ಗುಂಡಮ್ಮನ ಮೇಲೆ ಪ್ರೀತಿ ಮೂಡುವುದಾದರೂ ಹೇಗೆ, ರೂಪವೇ ಮುಖ್ಯ ಎಂದು ಭಾವಿಸಿರುವ ನಾಯಕ ಲಕ್ಕಿ ಗುಂಡಮ್ಮನ ಪ್ರೀತಿಗೆ ಸೋತಿದ್ದು ಹೇಗೆ ಎಂಬ ವಿಭಿನ್ನ ಕಥೆ ಹೊಂದಿದೆ ಈ ಧಾರಾವಾಹಿ.
ನಾಯಕ ಲಕ್ಕಿ ಅಲಿಯಾಸ್ ಲಕ್ಷ್ಮಣ್ ಆಗಿ ಕೊಡಗಿನ ಕುವರ ಭರತ್ ಬೋಪಣ್ಣ, ನಾಯಕಿ ಗುಂಡಮ್ಮ ಅಲಿಯಾಸ್ ಗೀತಾ ಆಗಿ ಗೀತಾ ಭಾರತಿ ಭಟ್ ಕಿರುತೆರೆ ಲೋಕಕ್ಕೆ ಪರಿಚಿತರಾಗಲು ಕಾರಣ ಈ 'ಬ್ರಹ್ಮಗಂಟು'. ಹಿರಿಯ ನಟ, ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ನಾಯಕನ ಅಪ್ಪನಾಗಿ ನಟಿಸುವ ಮೂಲಕ ಈ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಇವರೊಂದಿಗೆ ವನಿತಾ ವಾಸು, ಗಾಯತ್ರಿ ಪ್ರಭಾಕರ್, ಸ್ವಾತಿ ಗುರುದತ್, ಪ್ರಥಮ ಕೂಡಾ ಅಭಿನಯಿಸಿದ್ದಾರೆ.