ಬಿಗ್ ಬಾಸ್ ಸೀಸನ್ 8ರ ಮೊದಲ ವಾರ ಸುದೀಪ್ ಅವರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ಮನೆಯ ಹಿರಿಯ ಸದಸ್ಯರಾದ ಶಂಕರ್ ಅಶ್ವತ್ಥ.
ಹೌದು..'ಸೂಪರ್ ಸಂಡೇ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಶಂಕರ್ ಅವರನ್ನು ಸುದೀಪ್ ಮಾತನಾಡಿಸಿದಾಗ, ಬಿಗ್ ಬಾಸ್ ಮನೆಯೊಳಗೆ ಹೋದರೆ ಕೆಟ್ಟದನ್ನು ಬಿಡುತ್ತೀರಿ ಅಥವಾ ಒಳ್ಳೆಯದನ್ನು ಕಲಿಯುತ್ತೀರಿ ಎಂದು ಹಿರಿಯರೊಬ್ಬರು ಹೇಳಿದ್ದರು. ಕಳೆದ 45 ವರ್ಷದಿಂದ ನಾನು ಸಿಗರೇಟ್ ಸೇದುತ್ತಿದ್ದೇನೆ. ಈ ವಿಷಯ ಬಹುತೇಕರಿಗೆ ಗೊತ್ತಿಲ್ಲ. ಆದರೆ, ಕಳೆದ ಎರಡು ವಾರದಿಂದ ನಾನು ಸಿಗರೇಟ್ ಮುಟ್ಟಿಲ್ಲ ಎಂದು ತಮ್ಮಲ್ಲಿ ಆಗಿರುವ ಒಂದು ಒಳ್ಳೆಯ ಬದಲಾವಣೆ ಬಗ್ಗೆ ಶಂಕರ್ ಹೇಳಿಕೊಂಡರು.
ಈ ವೇಳೆ ಶಂಕರ್ ಅಶ್ವತ್ಥ ಅವರು ಬಿಗ್ ಬಾಸ್ನಲ್ಲಿ ಪರ್ಫಾರ್ಮ್ ಮಾಡುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸುದೀಪ್, ಮನೆಯ ಇತರ ಸದಸ್ಯರಿಗೂ ಶಂಕರ್ ಬಗ್ಗೆ ಗೌರವ ಇದೆ. ಅನೇಕ ಅಭಿಪ್ರಾಯಗಳನ್ನು ಅವರು ಯಾವುದೇ ಮುಚ್ಚುಮರೆ ಇಲ್ಲದೇ ಹಂಚಿಕೊಳ್ಳುತ್ತಿದ್ದಾರೆ. ಹಿರಿಯರಾದ ಅವರ ಮಾತಿಗೆ ಎಲ್ಲ ಸ್ಪರ್ಧಿಗಳು ಮನ್ನಣೆ ನೀಡುತ್ತಿದ್ದಾರೆ. ಆದರೆ, ಈ ವಾತಾವರಣ ಇನ್ನೆಷ್ಟು ದಿನ ಹಾಗೇ ಇರಲಿದೆಯೋ ಗೊತ್ತಿಲ್ಲ ಎಂದರು. ಈ ಎಲ್ಲಾ ಕಾರಣಗಳಿಂದ ಈ ವಾರದ ಕಿಚ್ಚನ ಚಪ್ಪಾಳೆ ಶಂಕರ್ ಅವರಿಗೆ ಸಿಕ್ಕಿತು.
ಮುಂದಿನ ವಾರದ ನಾಮಿನೇಷನ್ನಿಂದ ಯಾರು ಸೇಫ್?
ಧನುಶ್ರೀ ಮನೆಯಿಂದ ಹೊರಗೆ ಬರಲು ಬಾಗಿಲ ಬಳಿ ಬಂದಾಗ ಬಿಗ್ ಬಾಸ್ ಒಂದು ಸ್ಪೆಷಲ್ ಅಧಿಕಾರವನ್ನು ಧನುಶ್ರೀಗೆ ನೀಡಿದರು. ಈ ಬಾರಿ ನಾಮಿನೇಷನಲ್ ಪ್ರಕ್ರಿಯೆಯಿಂದ ಒಬ್ಬ ಸ್ಪರ್ಧಿಯನ್ನು ನೀವು ಸೇಫ್ ಮಾಡಬಹುದು. ನೀವು ಯಾರನ್ನು ಸೇಫ್ ಮಾಡಲು ಬಯಸುತ್ತೀರಿ ಎಂದು ಕೇಳಿದರು. ಅದಕ್ಕೆ 'ರಘು ಗೌಡ' ಹೆಸರನ್ನು ಧನುಶ್ರೀ ಹೇಳಿದರು. ಹೀಗಾಗಿ, ಈ ವಾರದ ಎಲಿಮಿನೇಷನ್‌ನಿಂದ ರಘು ಗೌಡ ಸೇಫ್ ಆಗಿದ್ದಾರೆ.
ರಘು ಅವರೇ ಯಾಕೆ?
ಈ ಬಗ್ಗೆ ಧನುಶ್ರೀಗೆ ಬಿಗ್ ಬಾಸ್ ಕಡೆಯಿಂದ ಪ್ರಶ್ನೆ ಬಂತು. ಅದಕ್ಕೆ ಉತ್ತರ ನೀಡಿದ ಧನುಶ್ರೀ, ರಘು ಗೌಡ ಅವರು ಸಾಮರ್ಥ್ಯವನ್ನು ಏನೆಂಬುದನ್ನು ಖಂಡಿತ ಸಾಬೀತುಪಡಿಸಿಕೊಳ್ಳುತ್ತಾರೆ. ಆ ನಂಬಿಕೆ ನನಗೆ ಇದೆ. ಅದಕ್ಕಾಗಿ ಅವರಿಗೆ ಕಾಲಾವಕಾಶ ಬೇಕು ಎಂದು ಹೇಳಿದರು. ಮನೆಯಿಂದ ಹೊರಬಂದ ಧನುಶ್ರೀಗೆ ಉಳಿದ ಸದಸ್ಯರು ಸೆಲ್ಫಿಗೆ ಪೋಸ್ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.