ಈಗ ಸಿನಿಮಾ ಸ್ಟಾರ್, ಕಿರುತೆರೆಯಲ್ಲಿ ಹೆಸರು ಮಾಡಿರುವವರಲ್ಲಿ ಎಷ್ಟೊ ಮಂದಿ ಓದಿರುವುದೇ ಒಂದು, ಅವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವೇ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ಗೀತಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಹೆಸರು ಭವ್ಯ ಗೌಡ. ಭವ್ಯ ಕನಸು ಕಂಡಿದ್ದು ಗಗನಸಖಿಯಾಗಬೇಕು ಎಂದು, ಆದರೆ ಆದ್ದದ್ದು ನಟಿ.
![Bhavya gowda](https://etvbharatimages.akamaized.net/etvbharat/prod-images/5970126_818_5970126_1580916293060.png)
ತಾನೊಬ್ಬಳು ನಟಿಯಾಗಿ ಮಿಂಚಬೇಕು ಎಂದು ಯಾವತ್ತಿಗೂ ಕನಸು ಕಾಣದ ಭವ್ಯಗೌಡ ಅಪ್ಪ ಅಮ್ಮನ ಕನಸು ನನಸು ಮಾಡುವ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದಿದ್ದಾರೆ. ಸಿನಿಮಾ, ಧಾರಾವಾಹಿ ನಟಿಯರನ್ನು ಕಂಡಾಗ ಭವ್ಯ ಅಪ್ಪ, ಅಮ್ಮ ನೀನು ಕೂಡಾ ಇವರಂತೆ ಬಣ್ಣದ ಲೋಕದಲ್ಲಿ ಮಿಂಚಬೇಕು, ನಿನ್ನಿಂದ ಅದು ಸಾಧ್ಯ ಎಂದು ಹುರಿದುಂಬಿಸುತ್ತಿದ್ದರಂತೆ. ಅವರಿಗೆ ಮಗಳು ಬಣ್ಣದ ಲೋಕದಲ್ಲಿ ಮಿಂಚಲಿ ಎಂಬ ಬಯಕೆ. ಅಪ್ಪ-ಅಮ್ಮನ ಬಯಕೆಗೆ ಅಸ್ತು ಎಂದಿರುವ ಭವ್ಯ ಇದೀಗ ಗೀತಾ ಆಗಿ ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದಾರೆ. ಕಿರುತೆರೆಗೆ ಬಂದ ಮೇಲೆ , ಅದರಲ್ಲೂ ಒಳ್ಳೆಯ ಪಾತ್ರ ಸಿಕ್ಕರೆ ಜನರ ಮನಸ್ಸು ಆವರಿಸುವುದು ಕಷ್ಟವೇನಲ್ಲ. ಆದರೆ ಈಕೆಯ ವಿಚಾರದಲ್ಲಿ ಆಗಿದ್ದೇ ಬೇರೆ. ಈಕೆ ಬಣ್ಣದ ಲೋಕಕ್ಕೆ ಕಾಲಿಡುವ ಮೊದಲೇ ನೆಟಿಜನ್ಸ್ಗಳ ಕಣ್ಮಣಿಯಾಗಿದ್ದರು. ಅದಕ್ಕೆ ಕಾರಣ ಟಿಕ್ ಟಾಕ್ ಆ್ಯಪ್. ಸದಾಕಾಲ ಟಿಕ್ ಟಾಕ್ನಲ್ಲಿ ಆ್ಯಕ್ಟಿವ್ ಇದ್ದ ಭವ್ಯ ಆಗ್ಗಾಗ್ಗೆ ವಿಭಿನ್ನ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದರು.
![Geeta fame Bhavya gowda](https://etvbharatimages.akamaized.net/etvbharat/prod-images/5970126_304_5970126_1580916247883.png)
ನಾನು ಟಿಕ್ ಟಾಕ್ ಸ್ಟಾರ್ ಹೌದು, ಆದರೆ ಟಿಕ್ ಟಾಕ್ ಬೇರೆ. ಧಾರಾವಾಹಿಯೇ ಬೇರೆ. ಟಿಕ್ ಟಾಕ್ನಲ್ಲಿ ನಾವು ಬೇರೆಯವರ ಸ್ವರಕ್ಕೆ ಡಬ್ ಮಾಡುತ್ತೇವೆ. ಆದರೆ ನಟನೆಯಲ್ಲಿ ಹಾಗಲ್ಲ, ಧಾರಾವಾಹಿಯಲ್ಲಿ ಪ್ರತಿದಿನವೂ ಹೊಸದನ್ನು ಕಲಿಯಬೇಕಾಗುತ್ತದೆ. ಒಂದರ್ಥದಲ್ಲಿ ಹೇಳಬೇಕೆಂದರೆ ನಟನೆಯ ಆಳವನ್ನು ಧಾರಾವಾಹಿ ಕಲಿಸುತ್ತದೆ ಎನ್ನುತ್ತಾರೆ ಭವ್ಯ. ನಟಿಸಿದ ಮೊದಲೇ ಧಾರಾವಾಹಿಯಲ್ಲೇ ನಾಯಕಿಯ ಪಟ್ಟ ದೊರಕಿರುವುದು ಭವ್ಯ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ. ಅದಕ್ಕಾಗಿ ಅವರು ನಿರ್ದೇಶಕ ರಾಮ್ ಜೀ ಅವರಿಗೆ ಧನ್ಯವಾದ ಹೇಳಲು ಮರೆಯಲಿಲ್ಲ. ನಟನಾ ಲೋಕ ನನಗೆ ತೀರಾ ಹೊಸದು. ನಟನೆಯ ಆಗು ಹೋಗುಗಳು ತಿಳಿಯದ ನನ್ನನ್ನು ತಿದ್ದಿ ತೀಡಿ ನಟಿಯನ್ನಾಗಿ ಮಾಡಿದ್ದೇ ನಿರ್ದೇಶಕ ರಾಮ್ ಜಿ. ಅವರಿಂದ ನಾನು ಸಾಕಷ್ಟು ಕಲಿತೆ ಎಂದು ತಮ್ಮ ನಟನಾ ಯಾನದ ಬಗ್ಗೆ ವಿವರಿಸುತ್ತಾರೆ ಭವ್ಯ.