ಡಬ್ಬಿಂಗ್ ವಿರೋಧದ ನಡುವೆಯೂ ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳ ಕಾರುಬಾರು ಜೋರಾಗಿದೆ. ವಾಹಿನಿಗಳು ಒಂದೊಂದಾಗಿ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡಲು ಆರಂಭಿಸಿವೆ.
ಈ ನಡುವೆ ಡಬ್ಬಿಂಗ್ ಸಿನಿಮಾಗಳ ಪ್ರಸಾರ ಕೂಡಾ ನಿಂತಿಲ್ಲ. ಜಗಮಲ್ಲ , ಬಿಗಿಲ್ , ಕಮಾಂಡೋ, ಕಾಂಚನ 3 ಡಬ್ಬಿಂಗ್ ಚಿತ್ರಗಳು ಕೂಡಾ ಕಿರುತೆರೆಯಲ್ಲಿ ಪ್ರಸಾರವಾಗಿವೆ. ಇದೀಗ 'ಬಾಹುಬಲಿ' ಸರದಿ. ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಎಸ್. ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾದ ಕನ್ನಡ ಡಬ್ಬಿಂಗ್ ಅವತರಣಿಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅತೀ ಶೀಘ್ರದಲ್ಲಿ ಪ್ರಸಾರವಾಗಲಿದೆ.
2015ರಲ್ಲಿ 'ಬಾಹುಬಲಿ' ಮೊದಲ ಭಾಗ ಬಿಡುಗಡೆಯಾಗಿದ್ದು ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಡಬ್ಬಿಂಗ್ ಇಲ್ಲದ ಕಾರಣ ಸಿನಿಮಾವನ್ನು ತೆಲುಗು ಭಾಷೆಯಲ್ಲೇ ನೋಡುವಂತಾಗಿತ್ತು. ವಿಭಿನ್ನ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ಸೆಳೆದ ಬಾಹುಬಲಿಯ ಎರಡನೇ ಭಾಗ 2017ರಲ್ಲಿ ಬಿಡುಗಡೆಯಾಗಿತ್ತು.
ಡಬ್ಬಿಂಗ್ಪ್ರಿಯರು ಚಿತ್ರವನ್ನು ಕನ್ನಡದಲ್ಲೇ ಬಿಡುಗಡೆ ಮಾಡಬೇಕೆಂದು ಅಭಿಯಾನ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇದೀಗ 'ಬಾಹುಬಲಿ' ಸಿನಿಮಾ ಬಿಡುಗಡೆಯಾಗಿ 5 ವರ್ಷಗಳ ಬಳಿಕ ಡಬ್ ಆಗಿ ಕನ್ನಡದಲ್ಲಿ ಬರುತ್ತಿರುವುದು ಡಬ್ಬಿಂಗ್ ಪರ ಹೋರಾಟಗಾರರಲ್ಲಿ ಸಂತಸ ಮೂಡಿಸಿದೆ.