ನಟ, ನಿರ್ದೇಶಕ ಅರುಣ್ ಸಾಗರ್ ಅಗಾಧ ಪ್ರತಿಭೆ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡವರು. ನಿರ್ದೇಶನದ ಜೊತೆ ನಟರಾಗಿ ಕೂಡಾ ಮೋಡಿ ಮಾಡಿರುವ ಅರುಣ್ ಸಾಗರ್, ಇದೀಗ ಬಹಳ ದಿನಗಳ ನಂತರ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಅದು ಕೂಡಾ ಕಿರುತೆರೆಯಲ್ಲಿ. ಬಹುಮುಖ ಪ್ರತಿಭೆ ಅರುಣ್ ಸಾಗರ್ ಕಿರುತೆರೆಗೆ ಬಂದಿರುವುದೇನೋ ನಿಜ, ಆದರೆ ಅವರು ಕಾಣಿಸಿಕೊಳ್ಳುತ್ತಿರುವುದು ಅತಿಥಿ ಪಾತ್ರದಲ್ಲಿ.
ಜೀ ಕನ್ನಡ ವಾಹಿನಿಯಲ್ಲಿ, ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿರುವ ಹೊಸ ಧಾರಾವಾಹಿ 'ಸತ್ಯ' ದಲ್ಲಿ ಅರುಣ್ ಸಾಗರ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿ ಸತ್ಯ ಹಾಗೂ ದಿವ್ಯ ತಂದೆಯಾಗಿ ಕಾಣಿಸಿಕೊಂಡಿದ್ದಾರೆ ಅರುಣ್ ಸಾಗರ್. ಅನಾರೋಗ್ಯದಿಂದ ನಾಯಕಿ ಸತ್ಯಳ ತಂದೆ ನಿಧನರಾಗಿರುತ್ತಾರೆ. ಅವರು ಸಾಯುವ ಕೆಲ ನಿಮಿಷಗಳ ಮುಂಚೆ ಮಗಳು ಸತ್ಯಳ ಬಳಿಯಿಂದ ನೀನು ಗಂಡುಮಗನ ರೀತಿ ಈ ಕುಟುಂಬವನ್ನು ನೋಡಿಕೊಳ್ಳಬೇಕು ಎಂದು ಮಾತು ತೆಗೆದುಕೊಂಡಿರುತ್ತಾರೆ. ತಂದೆಗೆ ಕೊಟ್ಟ ಮಾತಿನಂತೆ ಸತ್ಯ , ಮನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಾಳೆ.
ಇದನ್ನೂ ಓದಿ: ಮಾತಿನ ಮನೆಯಲ್ಲಿ ಶಾನ್ವಿ ಶ್ರೀವಾತ್ಸವ್ ಅಭಿನಯದ 'ಕಸ್ತೂರಿ ಮಹಲ್'...!
ಮಜಾ ವಿತ್ ಸೃಜಾ, ಕಯ್ಯಂ ಕೊಟ್ರ, ಕಾಮಿಡಿ ಸೈಕಲ್, ಸಿಂಪಲ್ ಆಗಿ ಒಂದು ಸಿಂಗಿಂಗ್ ಶೋ, ಬೆಂಗಳೂರು ಬೆಣ್ಣೆ ದೋಸೆ, ಕನೆಕ್ಷನ್ ಕನೆಕ್ಷನ್ ಮುಂತಾದ ಶೋಗಳ ನಿರೂಪಕರಾಗಿಯೂ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಅರುಣ್ ಸಾಗರ್, ಬಿಗ್ ಬಾಸ್ ಸೀಸನ್ 1ರ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು. ಬರೋಬ್ಬರಿ 99 ದಿನಗಳ ಕಾಲ ದೊಡ್ಮನೆಯಲ್ಲಿದ್ದ ಅರುಣ್ ಸಾಗರ್ ಮಾತು, ನಡವಳಿಕೆ, ಪ್ರತಿಭೆಯ ಮೂಲಕ ವೀಕ್ಷಕರನ್ನು ರಂಜಿಸಿದ್ದರು.