ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಾಯಕಿ ಪಾರ್ವತಿ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಐಶ್ವರ್ಯ ಪಿಸ್ಸೆ ಇದೀಗ 'ಸುಂದರಿ'ಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಉದಯ ವಾಹಿನಿಯಲ್ಲಿ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಪ್ರಸಾರವಾಗಲಿರುವ 'ಸುಂದರಿ' ಧಾರಾವಾಹಿಯಲ್ಲಿ ಐಶ್ವರ್ಯ ನಾಯಕಿಯಾಗಿ ನಟಿಸಲಿದ್ದಾರೆ.
ಐಶ್ವರ್ಯ ಬಹಳ ದಿನಗಳಿಂದ ತಮಿಳು, ತೆಲುಗು ಕಿರುತೆರೆಯಲ್ಲಿ ಬ್ಯುಸಿ ಇದ್ದು 'ಸುಂದರಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ವಾಪಸ್ಸಾಗಿದ್ದಾರೆ. 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿ ನಂತರ ತೆಲುಗು ಕಿರುತೆರೆಗೆ ಹಾರಿದ ಐಶ್ವರ್ಯ ಅಲ್ಲಿ ಕಸ್ತೂರಿ ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರದಲ್ಲಿ ನಟಿಸಿ ತೆಲುಗು ವೀಕ್ಷಕರಿಗೆ ಪರಿಚಯವಾದರು. ಐಶ್ವರ್ಯ ಬಣ್ಣದ ಲೋಕಕ್ಕೆ ಬಂದದ್ದು 'ಪುನರ್ ವಿವಾಹ' ಧಾರಾವಾಹಿ ಮೂಲಕ. ಪುನರ್ ವಿವಾಹ ಧಾರಾವಾಹಿ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಿರಿಜಾ ಕಲ್ಯಾಣ' ಪೌರಾಣಿಕ ಧಾರಾವಾಹಿಯಲ್ಲಿ ಕೂಡಾ ಬಣ್ಣ ಹಚ್ಚಿದ ಐಶ್ವರ್ಯ ಅವರನ್ನು ಜನರು ಗುರುತಿಸಿದ್ದು ಮೇಘನಾ ಆಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯ ಮೇಘನಾ ಆಗಿ ನಟಿಸಿದ್ದ ಐಶ್ವರ್ಯ, ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಪಾರ್ವತಿ ಆಗಿ ನಟಿಸಿದರು. ಈ ಧಾರಾವಾಹಿ ತೆಲುಗಿನಲ್ಲಿ 'ಅಗ್ನಿಸಾಕ್ಷಿ' ಹೆಸರಿನಲ್ಲಿ ಪ್ರಸಾರ ಕಾಣುತ್ತಿದ್ದು ಅದರಲ್ಲಿ ಕೂಡಾ ಐಶ್ವರ್ಯ, ನಾಯಕಿ ಗೌರಿಯಾಗಿ ನಟಿಸಿದ್ದರು. ಇದೀಗ ಸುಂದರಿಯಾಗಿ ಮತ್ತೆ ಕನ್ನಡ ಕಿರುತೆರೆಗೆ ಬಂದಿದ್ದಾರೆ. ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದಲ್ಲಿ ಯಶ್ ತಂಗಿಯಾಗಿ ಕೂಡಾ ನಟಿಸಿದ್ದಾರೆ.