ಸ್ಯಾಂಡಲ್ವುಡ್ ನಟಿಮಣಿಯರು ಕಿರು ಚಿತ್ರಗಳಲ್ಲಿ ನಟಿಸೋದು ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ಈಗ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ', 'ಫ್ಯಾನ್' ಹಾಗು ಬಿಡುಗಡೆಗೆ ಸಿದ್ಧವಿರುವ 'ಐರಾವನ್' ಚಿತ್ರಗಳಲ್ಲಿ ಅಭಿನಯಿಸಿರುವ ಅದ್ವಿತಿ ಶೆಟ್ಟಿ ರಾಷ್ಟ್ರ ಪ್ರಶಸ್ತಿ ಪಡೆದ 'ಮಹಾನ್ ಹುತಾತ್ಮ' ಕಿರುಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಮಂಗಳೂರು ಮೂಲದ ಅದ್ವಿತಿ ಶೆಟ್ಟಿ ಈ ಕಿರುಚಿತ್ರದಲ್ಲಿ ದುರ್ಗಾ ಬಾಬಿ ಪಾತ್ರದಲ್ಲಿ ನಟಿಸಿದ್ದಾರೆ. ಹಿಸ್ಟೋರಿಕ್ ಪಾತ್ರಗಳನ್ನು ಮಾಡುವ ಆಸೆ ಇತ್ತು. ಅದನ್ನು 'ಮಹಾನ್ ಹುತಾತ್ಮ' ಮೂಲಕ ಈಡೇರಿಸಿಕೊಂಡಿದ್ದೇನೆ. ಕಿರುಚಿತ್ರ ಸಿದ್ಧವಾಗಿ ಮೂರು ವರ್ಷಗಳಾದರೂ ಒಂದು ಬಾರಿಯೂ ವೀಕ್ಷಣೆ ಮಾಡಿರಲಿಲ್ಲ. ಇದೀಗ ನೋಡಿದ್ದೇನೆ. ಒಂದೊಳ್ಳೆ ಸಿನಿಮಾ ರೀತಿಯಲ್ಲಿ ಮೂಡಿಬಂದಿದೆ ಎಂದು ಅದ್ವಿತಿ ಶೆಟ್ಟಿ ಹೇಳಿದ್ದಾರೆ.
ಅಕ್ಷಯ್ ಎಂಟರ್ಟೈನ್ ಮೆಂಟ್ ಮತ್ತು ಪುರಾಣಿಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗಿರುವ 'ಮಹಾನ್ ಹುತಾತ್ಮ' ಕಿರುಚಿತ್ರಕ್ಕೆ 2018ರಲ್ಲಿ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಅದಾದ ಬಳಿಕ ಒಂದಲ್ಲ, ಎರಡಲ್ಲ 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಅವಾರ್ಡ್ ಗಳನ್ನು ಮುಡಿಗೇರಿಸಿಕೊಂಡಿದೆ. ಇದೀಗ ಇದೇ ಕಿರುಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಪುತ್ರ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ 'ಮಹಾನ್ ಹುತಾತ್ಮ' ಚಿತ್ರದ ಬಿಡುಗಡೆ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿತ್ತು.
ಇನ್ನು ಕಿರುಚಿತ್ರದಲ್ಲಿ ಅಕ್ಷಯ್ ಹಾಗೂ ಅದ್ವಿತಿ ಶೆಟ್ಟಿ ಅಲ್ಲದೆ, ಹಿರಿಯ ನಟ ಶ್ರೀನಾಥ್, ಸಾಗರ್ ಪುರಾಣಿಕ್, ಅಚಿಂತ್ಯ ಪುರಾಣಿಕ್, ವರುಣ್ ಶ್ರೀನಿವಾಸ್, ಕುಲ್ದೀಪ್, ಮನೋಜ್, ಶಶಿಕುಮಾರ್, ಪೀಟರ್, ವರುಣ್ ಶ್ರೀನಿವಾಸ್ ರಾಜಗುರು ಸಹ ಅಭಿನಯಿಸಿದ್ದಾರೆ. ಹಾಗು 'ಡ್ರಾಮಾ ಜ್ಯೂನಿಯರ್ಸ್' ಖ್ಯಾತಿಯ ಅಚಿಂತ್ಯ ಸಹ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಗಮನ ಸೆಳೆಯುತ್ತಾನೆ.
ಅಭಿಲಾಷ್ ಕಲಾತಿ ಛಾಯಾಗ್ರಹಣದಲ್ಲಿ ಮೂಡಿಬಂದಿದ್ದು, ಮಹೇಶ್ ಎಸ್ ಸಂಕಲನ ಹಾಗೂ ಅನಂತ್ ಕಾಮತ್ ಸೌಂಡ್ ಡಿಸೈನ್ ಮಾಡಿದ್ದಾರೆ. ಸಾಗರ್ ಪುರಾಣಿಕ್, ಅಕ್ಷರಾ ಭಾರದ್ವಾಜ್, ಶ್ರವಣ್ ಕವತ್ತೂರ್ ಚಿತ್ರಕಥೆ ಬರೆದಿದ್ದಾರೆ. ಇಷ್ಟೆಲ್ಲಾ ವಿಶೇಷತೆ ಇರುವ ಮಹಾನ್ ಹುತಾತ್ಮ ಕಿರುಚಿತ್ರ ಏಪ್ರಿಲ್ 9ರಂದು ಪೇಡ್ ಪ್ರೀಮಿಯರ್ ಆಗಲಿದೆ. ಎಂಎಚ್ MHfilm.in ನಲ್ಲಿ ಪ್ರೀಮಿಯರ್ ಆಗಲಿದೆ. 30 ರೂ. ನೀಡಿ ಈ ಕಿರುಚಿತ್ರವನ್ನು ನೋಡಬಹುದಾಗಿದೆ.