ಕನ್ನಡ ಕಿರುತೆರೆಯಲ್ಲಿ ಅಮ್ಮನ ಪಾತ್ರಗಳನ್ನು ನಿರ್ವಹಿಸುತ್ತಿರುವವರಲ್ಲಿ ನಟಿ ಯಮುನಾ ಶ್ರೀನಿಧಿ ಕೂಡಾ ಒಬ್ಬರು. ಅವರು ತಮ್ಮ ಗುರಿತ ಸಾಧಿಸಲು ಎನ್ ಸಿಸಿ ಕಾರಣವಾಗಿದೆಯಂತೆ. ಇದನ್ನು ಖುದ್ದು ಅವರ ಇನ್ಸ್ಟಾ ಖಾತೆಯಲ್ಲಿ ಅವರೇ ಬರೆದುಕೊಂಡಿದ್ದಾರೆ.
ಎನ್ ಸಿಸಿಯಲ್ಲಿ ಕಳೆದ ದಿನಗಳು ನನ್ನನ್ನು ಎಚ್ಚರಿಸಿತು. ನನ್ನ ನಿಜವಾದ ಆಸಕ್ತಿಯನ್ನು ಅರಿಯುವಂತೆ ಮಾಡಿದವು. ಕನಸು ಕಾಣಲು ಹೇಳಿಕೊಟ್ಟಿತು. ಮಾತ್ರವಲ್ಲ ಗುರಿಯನ್ನು ತೋರಿಸಿತು. ಜೊತೆಗೆ ನನ್ನನ್ನು ಹುಡುಕುವಂತೆ ಮಾಡಿತು. ನನ್ನ ನಿಜವಾದ ಉತ್ಸಾಹವನ್ನು ಅರಿಯುವಂತೆ ಮಾಡಿತು. ನನಗೆ ಭರತನಾಟ್ಯ ಕಲಿಯುವ ಉತ್ಸಾಹ ಇತ್ತು. ನಾನು ಕಲಿಯಬೇಕೆಂದು ನಿರ್ಧರಿಸಿದೆ. ನಾನು ಅದೃಷ್ಟವಂತೆ. ಯಾಕೆಂದರೆ ಆ ಸಮಯದಲ್ಲಿ ನನಗೆ ಪೋಷಕರ , ಶಿಕ್ಷಕರ ಹಾಗೂ ಎನ್ ಸಿಸಿ ಆಫೀಸರ್ ಗಳ ಬೆಂಬಲ ದೊರಕಿತು. ನನ್ನ ಎನ್ ಸಿಸಿ ತರಬೇತಿ 1995ರಲ್ಲಿ " ಸಿ" ಸರ್ಟಿಫಿಕೇಟ್ ಪಡೆಯುವುದರೊಂದಿಗೆ ಮುಗಿಯಿತು. ಆಮೇಲೆ ನೃತ್ಯದ ಕಡೆ ಗಮನ ಹರಿಸಿದೆ ಎನ್ನುತ್ತಾರೆ ಯಮುನಾ ಶ್ರೀನಿಧಿ.
ಎನ್ ಸಿಸಿಯಲ್ಲಿನ ಹಲವು ವರುಷಗಳ ಕಟ್ಟುನಿಟ್ಟಿನ ಶಿಸ್ತು, ಕಠಿಣ ಪರಿಶ್ರಮ ಎಲ್ಲವೂ ಕೂಡಾ ನನಗೆ ಇಂದು ವಿವಿಧ ಹಂತಗಳಲ್ಲಿ ನೆರವಾಗಿದೆ. ಯಾವುದೇ ಪಾತ್ರವನ್ನೇ ನೀಡಲಿ, ಈ 44 ನೇ ವಯಸ್ಸಿನಲ್ಲಿ ಲೀಲಾಜಾಲವಾಗಿ ಮಾಡುತ್ತೇನೆ ಎಂದರೆ ಅದಕ್ಕೆ ಎನ್ ಸಿಸಿಯ ಮೂಲಕ ಕಲಿತ ಶಿಸ್ತು ಕಾರಣ ಎಂದಿದ್ದಾರೆ.