ಲಾಕ್ ಡೌನ್ನಿಂದಾಗಿ ಈಗಾಗಲೇ ಸಾಕಷ್ಟು ಕನ್ನಡ ಧಾರಾವಾಹಿಗಳು ಸ್ಥಗಿತವಾಗಿದ್ದು ಆ ಜಾಗದಲ್ಲಿ ಒಂದಷ್ಟು ಡಬ್ಬಿಂಗ್ ಧಾರಾವಾಹಿಗಳು ಈಗಾಗಲೇ ಪ್ರಸಾರ ಆರಂಭಿಸಿದೆ. ಇದರ ಜೊತೆಗೆ ವಿಭಿನ್ನ ಕಥೆ ಮೂಲಕ ವೀಕ್ಷಕರ ಮನ ಸೆಳೆದ ಒಂದಷ್ಟು ಧಾರಾವಾಹಿಗಳು ಮರು ಪ್ರಸಾರ ಕೂಡಾ ಆರಂಭಿಸಿದೆ.
ಅರುಂಧತಿ, ರಾಧಾ ರಮಣ, ಅಗ್ನಿ ಸಾಕ್ಷಿ ಧಾರಾವಾಹಿಗಳು ಈಗಾಗಲೇ ಶುರುವಾಗಿದ್ದು ಆ ಸಾಲಿಗೆ ಹೊಸದಾಗಿ 'ಪದ್ಮಾವತಿ' ಕೂಡಾ ಸೇರಿಕೊಂಡಿದೆ. ಪದ್ಮಾವತಿ ಧಾರಾವಾಹಿ ಮತ್ತೊಮ್ಮೆ ಪ್ರಸಾರ ಕಾಣುತ್ತಿರುವುದು ನಟಿ ಮೇಘಶ್ರೀಗೆ ಬಹಳ ಖುಷಿ ತಂದಿದೆ. ಪದ್ಮಾವತಿ ಧಾರಾವಾಹಿಯಲ್ಲಿ ನಾಯಕನ ತಂಗಿ ಆಗಿ ನಟಿಸುತ್ತಿದ್ದ ಮೇಘಶ್ರೀ, ಧಾರಾವಾಹಿ ಮರು ಪ್ರಸಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಕ್ಕರೆ ನಾಡಿನ ಸುಂದರ ಚೆಲುವೆ ಮೇಘಶ್ರೀ ಬಾಲನಟಿಯಾಗಿ ಬಣ್ಣ ಹಚ್ಚಿದವರು.
'ಮಕ್ಕಳ ಡಂಗುರ' ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ನಟನಾ ಕ್ಷೇತ್ರಕ್ಕೆ ಬಂದ ಮೇಘಶ್ರೀ ನಂತರ ಕಿರುತೆರೆಗೆ ಬಂದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಚರಣದಾಸಿ ಧಾರಾವಾಹಿಯಲ್ಲಿ ನಾಯಕಿಯ ಅಕ್ಕನಾಗಿ ನಟಿಸುವ ಮೂಲಕ ಕಿರುತೆರೆಗೆ ಬಂದ ಈಕೆ ಮುಂದೆ ಮೇಘ ಮಯೂರಿ ಧಾರಾವಾಹಿಯ ಚಾರುಲತಾ ಆಗಿ ಬದಲಾದರು. ಮೈನಾ, ದೇವತೆ, ಮಧುಬಾಲಾ, ಗುಂಡ್ಯಾನ ಹೆಂಡ್ತಿ, ಅವನು ಮತ್ತು ಶ್ರಾವಣಿ, ಜಸ್ಟ್ ಮಾತ್ ಮಾತಲ್ಲಿ, ಜೀವನ ಚೈತ್ರ ಧಾರಾವಾಹಿಗಳಲ್ಲಿ ಮೇಘಶ್ರೀ ಬಣ್ಣ ಹಚ್ಚಿದರು.
ಬಣ್ಣದ ಲೋಕದ ಖಳನಾಯಕಿ
ಮೇಘಶ್ರೀ ನಟಿಸಿರುವಂತ ಹೆಚ್ಚಿನ ಧಾರಾವಾಹಿಗಳಲ್ಲಿ ವಿಲನ್ ಪಾತ್ರದಲ್ಲೇ ಹೆಸರು ಮಾಡಿದ್ದಾರೆ. ಮೇಘಶ್ರೀ ಅವರಿಗೆ ನೆಗೆಟಿವ್ ರೋಲ್ಗಳಿಗೆ ಜೀವ ತುಂಬುವುದು ಬಹಳ ಇಷ್ಟ. ಒಂದರ ಮೇಲೆ ಒಂದರಂತೆ ನೆಗೆಟಿವ್ ರೋಲ್ಗಳು ಬಂದಾಗ ಆರಂಭದಲ್ಲಿ ಮೇಘಶ್ರೀ ಆಶ್ಚರ್ಯ ದಿಂದ ಏಕೆ ಬರೀ ವಿಲನ್ ರೋಲ್ ಕೊಡುತ್ತಿರಿ ಎಂದು ಕೇಳಿದ್ದರಂತೆ. ಅದಕ್ಕೆ ಬಂದ ಉತ್ತರ ನೀವು ಆ ಪಾತ್ರಕ್ಕೆ ಸೂಟ್ ಆಗುತ್ತೀರಿ ಎಂದಾಗಿತ್ತು. ಇದರ ಜೊತೆಗೆ ನೆಗೆಟಿವ್ ಪಾತ್ರದಲ್ಲಿ ನಟನೆಗೆ ಅವಕಾಶ ಜಾಸ್ತಿ ಎಂಬುದು ಮೇಘಶ್ರೀ ಅವರ ಅನಿಸಿಕೆ.
ಖಳನಟಿಯಾಗಿ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿರುವ ಮೇಘಶ್ರೀ, ಈಗಾಗಲೇ ಹಿರಿತೆರೆಯಲ್ಲೂ ಮಿಂಚಿದ್ದಾರೆ. 'ಕಡ್ಡಿಪುಡಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ತಂಗಿಯಾಗಿ ಬೆಳ್ಳಿತೆರೆಗೆ ಬಂದ ಈಕೆ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ನಾಯಕನ ತಂಗಿಯಾಗಿ ಸೈ ಎನಿಸಿಕೊಂಡರು. ಸಂತು ಸ್ಟ್ರೈಟ್ ಫಾರ್ವಡ್ನಲ್ಲಿ ನಾಯಕಿಯ ಗೆಳತಿಯಾಗಿ, ಮುಗುಳು ನಗೆ ಸಿನಿಮಾದಲ್ಲಿ ಗಣೇಶ್ ತಂಗಿಯಾಗಿ ನಟಿಸಿರುವ ಈಕೆ ಬ್ಯೂಟಿಫುಲ್ ಮನಸುಗಳು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಪಂಟ್ರು' ಸಿನಿಮಾದಲ್ಲಿ ನಾಯಕಿಯಾಗಿರುವ ಮೇಘಶ್ರೀಗೆ ಬಣ್ಣದ ಲೋಕದಲ್ಲೇ ಇನ್ನಷ್ಟು ಸಾಧಿಸುವ ಮಹಾದಾಸೆ.