ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಮಂಗಳ ಗೌರಿಯಾಗಿ ನಟಿಸುತ್ತಿರುವ ಚೆನ್ನಪಟ್ಟಣದ ಚೆಂದದ ಚೆಲುವೆ ಕಾವ್ಯಶ್ರೀ ಇತ್ತೀಚೆಗೆ ಅದ್ಧೂರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಇವರ ಫೋಟೋಗಳು ಹರಿದಾಡುತ್ತಿದ್ದು, ಕಮೆಂಟ್ಗಳ ಸುರಿಮಳೆಯೇ ಬರುತ್ತಿದೆ. ಮಂಗಳಗೌರಿ ಸೀರಿಯಲ್ ಮುಖಾಂತರ ಮನೆ ಮಾತಾಗಿರುವ ಕಾವ್ಯಶ್ರೀ ಬಾಲ್ಯದ ಕನಸನ್ನು ನನಸಾಗಿಸಿಕೊಂಡ ಸಂತಸದಲ್ಲಿದ್ದಾರೆ.
ಬಾಲ್ಯದಿಂದಲೂ ನಟಿಯಾಗಬೇಕು, ಟಿವಿ, ಸಿನಿಮಾಗಳಲ್ಲಿ ಬಣ್ಣ ಹಚ್ಚಬೇಕು ಎಂಬ ಮಹಾದಾಸೆ ಹೊಂದಿದ್ದ ಕಾವ್ಯಶ್ರೀ ಇದೀಗ ತಮ್ಮ ಕನಸು ನನಸಾಗಿದ್ದಕ್ಕೆ ಬಹಳ ಖುಷಿಯಲ್ಲಿದ್ದಾರೆ.
ಮಂಗಳಗೌರಿಯಾಗಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕಾವ್ಯಶ್ರೀ ಬಣ್ಣದ ಲೋಕಕ್ಕೆ ಬಂದ ಕತೆಯೇ ರೋಚಕವಾದುದು. ಅವರದು ಸಂಪ್ರದಾಯಸ್ಥ ಕುಟುಂಬ. ಬಣ್ಣದ ಲೋಕಕ್ಕೆ ಹೋಗಲೇ ಎಂದು ಕೇಳಿದಾಗ ಎಲ್ಲರೂ ಅಂದಿದ್ದು ಬೇಡ ಅಂತ. ಕೊನೆ ಪಕ್ಷ ನಿರೂಪಕಿಯಾಗಿ ಮಿಂಚಲೇಬೇಕು ಎಂದು ದೃಢ ನಿರ್ಧಾರ ತೆಗೆದುಕೊಂಡ ಕಾವ್ಯಶ್ರೀ ಅಲ್ಲಿ ಪಾಸ್ ಆದರು. ಮುಂದೆ ನಿರೂಪಣೆಯ ಜೊತೆಗೆ ಒಂದಷ್ಟು ಆಡಿಶನ್ ಗಳಲ್ಲಿ ಭಾಗವಹಿಸಿ ಮನೆಯೇ ಮಂತ್ರಾಲಯ ಧಾರಾವಾಹಿಗೆ ಆಯ್ಕೆ ಆದರು. ಚಿಕ್ಕ ಪಾತ್ರವಾದರೂ ಚೊಕ್ಕದಾಗಿ ನಟಿಸಿದ ಈಕೆ ಎರಡನೇ ಧಾರಾವಾಹಿಗೆ ನಾಯಕಿ ಆಗಿ ಆಯ್ಕೆ ಆದಾಗ ಸ್ವರ್ಗಕ್ಕೆ ಮೂರೇ ಗೇಣು ಅಂದುಕೊಂಡರು. ಕಳೆದ ವರ್ಷ ನಡೆದ ಕಲರ್ಸ್ ಕನ್ನಡ ಅನುಬಂಧ ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಮಗಳು ಪ್ರಶಸ್ತಿ ಪಡೆದಿರುವ ಈಕೆ ಸದ್ಯ ಕಿರುತೆರೆ ಲೋಕದಲ್ಲಿ ಖುಷಿಯಾಗಿದ್ದಾರೆ.